ಕೋಲ್ತತಾ: ಉತ್ತರ ಕೋಲ್ಕತಾದಲ್ಲಿ ಸಂಭವಿಸಿದ ಫ್ಲೈ ಓವರ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮೃತರ ಕುಟುಂಬಕ್ಕೆ ತಲಾ ರು.5 ಲಕ್ಷ ಪರಿಹಾರವನ್ನು ಗುರುವಾರ ಘೋಷಣೆ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿರುವ ಮಮತಾ ಬ್ಯಾನರ್ಜಿಯವರು, ಫ್ಲೈ ಓವರ್ ನಿರ್ಮಾಣ ಕಾರ್ಯ ಆರಂಭವಾಗಿರುವುದು 2008ರಲ್ಲಿ. ಅದು ಸಿಪಿಎಂ ಅಧಿಕಾರಾವಧಿಯಲ್ಲಿ ಆರಂಭವಾಗಿದೆ. ನಮ್ಮ ಅಧಿಕಾರಾವಧಿಯಲ್ಲಿ ಅಲ್ಲ. ಇದೀಗ ನಮ್ಮ ಗಮನವೇನಿದ್ದರೂ ಅವಶೇಷಗಳಡಿ ಸಿಲುಕಿರುವ ಜನರ ರಕ್ಷಣೆ ಮಾತ್ರ ಎಂದು ಹೇಳಿದ್ದಾರೆ.
ಅಲ್ಲದೆ, ಇದೇ ವೇಳೆ ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿರುವ ಅವರು, ದುರ್ಘಟನೆಯಲ್ಲಿ ಸಾವನ್ನಪ್ಪಿರುವ ಕುಟುಂಬಸ್ಥರಿಗೆ ರು.5 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ರು. 2 ಲಕ್ಷ ನೀಡುವುದಾಗಿ ಹೇಳಿದ್ದಾರೆ.
ಉತ್ತರ ಕೊಲ್ಕತ್ತಾದ ಬಾಬಾ ಬಜಾರ್‌ನಲ್ಲಿರುವ ಹಳೆಯ ಗಣೇಶ್ ಟಾಕೀಸ್ (ಗಿರೀಶ್ ಪಾರ್ಕ್) ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ವಿವೇಕಾನಂದ ಫ್ಲೈಓವರ್ ಕುಸಿದು ಬಿದ್ದು, ಸುಮಾರು 17 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, 100 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಸ್ತುತ ಅವಶೇಷಗಳಡಿ 150 ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆಗಳು ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಘಟನೆಗೆ ಸಂಬಂಧಿಸಿ ಈ ಹಿಂದೆ ಹೇಳಿಕೆ ನೀಡಿದ್ದ ಬಿಜೆಪಿಯು, ಘಟನೆಯ ಹೊಣೆಯನ್ನು ಮಮತಾ ಬ್ಯಾನರ್ಜಿಯವರು ಹೊರಬೇಕಿದ್ದು, ಫ್ಲೈ ಓವರ್ ನಿರ್ಮಾಣ ಕಾರ್ಯದಲ್ಲಿರುವ ಜನರು ಹಾಗೂ ಸಚಿವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿತ್ತು.