ಕೋಲ್ಕತಾ: ಉತ್ತರ ಕೋಲ್ಕತಾದಲ್ಲಿ ಸಂಭವಿಸಿದ ಫ್ಲೈ ಓವರ್ ದುರಂತವನ್ನು ಸಿಬಿಐ ತನಿಖೆಗೆ ಆದೇಶಿಸಬೇಕೆಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಗುರುವಾರ ಆಗ್ರಹಿಸಿದ್ದಾರೆ.
ಘಟನೆ ಕುರಿತಂತೆ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ವಿಮಾನ ನಿಲ್ದಾಣಕ್ಕೆ ಬಂದ ನಂತರ ದುರಾದೃಷ್ಟಕರ ವಿಚಾರದ ಬಗ್ಗೆ ತಿಳಿದುಕೊಂಡೆ. ಸುದ್ದಿ ತಿಳಿಯುತ್ತಿದ್ದಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಹಾಗೂ ರಕ್ಷಣಾ ಸಚಿವರಿಗೆ ಕರೆ ಮಾಡಲಾಯಿತು. ಸಂಭಾಷಣೆ ವೇಳೆ ಅಧಿಕಾರಿಗಳ ಬಳಿ ಸಾಧ್ಯವಾದಷ್ಟು ನೆರವು ಹಾಗೂ ಪರಿಹಾರ ನೀಡುವಂತೆ ಮನವಿಯನ್ನು ಮಾಡಿಕೊಂಡಿದ್ದೇನೆಂದು ಹೇಳಿದ್ದಾರೆ.
ಇದರಂತೆ ಎನ್ ಡಿಆರ್ ಎಫ್ ಪಡೆ ಪರಿಹಾರ ಕಾರ್ಯದಲ್ಲಿ ತೊಡಗಿಸುವಂತೆಯೂ ಅಧಿಕಾರಿಗಳ ಬಳಿ ಮನವಿ ಮಾಡಿದ್ದೇನೆ. ರಾಜ್ಯ ಸರ್ಕಾರ ಪರಿಹಾರ ಕಾರ್ಯವನ್ನು ಸರಿಯಾದ ರೀತಿಯಲ್ಲಿ ಮಾಡಬೇಕಿದೆ. ದುರ್ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದರೆ, ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಬೇಕು. ಘಟನೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಹೇಳಿದ್ದಾರೆ.
ಅಲ್ಲದೆ, ಘಟನಾ ಸ್ಥಳಕ್ಕೆ ಪ್ರಸ್ತುತ ಭೇಟಿ ನೀಡುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕುಂಟಾಗುತ್ತದೆ. ಹೀಗಾಗಿ ಸ್ಥಳಕ್ಕೆ ನಾನು ಭೇಟಿ ನೀಡುವುದಿಲ್ಲ. ಗಾಯಾಳುಗಳನ್ನು ನೋಡಲು ಆಸ್ಪತ್ರೆಗೆ ಭೇಟಿ ನೀಡುತ್ತೇನೆಂದು ಹೇಳಿದ್ದಾರೆ.