ಮುಂಬೈ: ಮಹಾರಾಷ್ಟ್ರದ ಭೀಕರ ಬರಗಾಲಕ್ಕೆ ಮತ್ತೊಂದು ಬಲಿಯಾಗಿದ್ದು, ಬಿಂದಿಗೆ ನೀರಿಗಾಗಿ ಬಿಸಿಲ ಝಳ ಲೆಕ್ಕಿಸದೇ ಸರತಿ ಸಾಲಲ್ಲಿ ನಿಂತಿದ್ದ ಸುಮಾರು 45 ವರ್ಷದ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ.
ಮಹಾರಾಷ್ಟ್ರದ ಲಾತೋರ್ ನಲ್ಲಿ ಈ ದುರಂತ ಸಂಭವಿಸಿದ್ದು, ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟು ಹೊತ್ತಿಗೆ ಮಹಿಳೆ ಸಾವನ್ನಪ್ಪಿದ್ದಳು ಎಂದು ವೈದ್ಯರು ತಿಳಿಸಿದ್ದಾರೆ. ಮೃತ ಮಹಿಳೆಯನ್ನು ಕೆವಲ್ ಬಾಯಿ ಕಾಂಬ್ಳೆ ಎಂದು ಗುರುತಿಸಲಾಗಿದ್ದು, ಲಾತುರ್ ಜಿಲ್ಲೆಯ ಅಟೋಲಾ ಗ್ರಾಮದಲ್ಲಿ ಬೋರ್ ವೆಲ್ ನೀರಿಗಾಗಿ ಮಹಿಳೆ ಸರತಿ ಸಾಲಲ್ಲಿ ನಿಂತಿದ್ದರು ಎಂದು ತಿಳಿದುಬಂದಿದೆ.
ಇಂತಹುದೇ ಘಟನೆ ಬೀಡ್ ನಲ್ಲಿ ಕಳೆದ ತಿಂಗಳು ಸಂಭವಿಸಿತ್ತು. ಬತ್ತುಹೋಗಿದ್ದ ಬಾವಿಯ ತಳದಲ್ಲಿರುವ ನೀರನ್ನು ತರಲು ಹೋಗಿದ್ದ 11 ವರ್ಷದ ಪುಟ್ಟ ಬಾಲಕ ಅಲ್ಲಿಯೇ ಸಾವನ್ನಪ್ಪಿದ್ದ. ಅಂತೆಯೇ ಇದೇ ಬಿಡ್ ನಲ್ಲಿ ಬೋರ್ ವೆಲ್ ನಿಂದ ಐದು ಬಾರಿ ಪಂಪ್ ಮಾಡಿದ್ದ 12 ವರ್ಷದ ಯೋಗಿತಾ ದೇಸಾಯಿ ಎಂಬ ಬಾಲಕಿ ಆರನೇ ಬಾರಿ ನೀರು ಪಂಪ್ ಮಾಡುವಾಗ ಸಾವಿಗೀಡಾಗಿದ್ದಳು. ಅನಾರೋಗ್ಯ ಪೀಡಿತಳಾಗಿದ್ದ ಯೋಗಿತಾ ದೇಸಾಯಿಯನ್ನು ಮನೆಯಲ್ಲಿ ಕುಡಿಯಲು ಒಂದು ಹನಿ ಕೂಡ ನೀರಿಲ್ಲದೇ ಇರುವುದರಿಂದ ಆಕೆಯ ಪೋಷಕರು ಬಲವಂತವಾಗಿ ಆಕೆಯನ್ನು ನೀರು ತರಲು ಕಳುಹಿಸಿದ್ದರು.
ಸುಮಾರು 42 ಡಿಗ್ರಿ ಉಷ್ಣಾಂಶವಿದ್ದ ಬೀಡ್ ನಲ್ಲಿ ಬಿಸಿಲಿನಲ್ಲೇ ಬೋರ್ ವೆಲ್ ಪಂಪ್ ಮಾಡುತ್ತಿದ್ದ ಯೋಗಿತಾ ದೇಸಾಯಿ ಬಿಸಿಲ ಝಳಕ್ಕೆ ಬಲಿಯಾಗಿದ್ದಳು.