ನವದೆಹಲಿ: ರಾಷ್ಟ್ರಪತಿ ಆಡಳಿತ ವಜಾಗೊಳಿಸಿ ಮಹತ್ವದ ತೀರ್ಪು ನೀಡಿದ್ದ ಉತ್ತರಾಖಂಡ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಕೆ.ಎಂ. ಜೋಸೆಫ್ ಅವರನ್ನು ಬುಧವಾರ ಆಂಧ್ರಪ್ರದೇಶ ಹೈಕೋರ್ಟಿಗೆ ವರ್ಗಾವಣೆ ಮಾಡಲಾಗಿದೆ.
ಹೈದರಾಬಾದ್ ಹೈಕೋರ್ಟಿನ ಪ್ರಭಾರ ಮುಖ್ಯ ನ್ಯಾಯಾಧೀಶ ದಿಲೀಪ್ ಬಿ ಭೋಸ್ಲೆ ಅವರನ್ನು ಮಧ್ಯ ಪ್ರದೇಶ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದ್ದು, ತೆರವಾದ ಅವರ ಸ್ಥಾನಕ್ಕೆ ಜೋಸೆಫ್ ಅವರನ್ನು ವರ್ಗಾವಣೆ ಮಾಡಲಾಗಿದೆ.
57 ವರ್ಷದ ಜೋಸೆಫ್ ಅವರು 2014ರಲ್ಲಿ ಉತ್ತರಾಖಂಡ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿದ್ದರು. ಕೇರಳದ ಎರ್ನಾಕುಳಂ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪದವಿ ಪಡೆದಿದ್ದ ಜೋಸೆಫ್ ಅವರು 1982ರಲ್ಲಿ ದಿಲ್ಲಿಯಲ್ಲಿ ವಕೀಲರಾಗಿ ಸನ್ನದು ತೆಗೆದುಕೊಂಡಿದ್ದರು. ಇವರು ಕೇರಳದಲ್ಲೂ ವಕೀಲ ವೃತ್ತಿಯನ್ನು ನಡೆಸಿದ್ದಾರೆ.
ಕಳೆದ ತಿಂಗಳು ಜೋಸೆಫ್ ನೇತೃತ್ವದ ಉತ್ತರಾಖಂಡ ಹೈಕೋರ್ಟ್ ಪೀಠ, ಉತ್ತರಾಖಂಡ್ ದಲ್ಲಿ ಜಾರಿಯಾಗಿದ್ದ ರಾಷ್ಟ್ರಪತಿ ಆಡಳಿತವನ್ನು ವಜಾಗೊಳಿಸಿತ್ತು. ಅಲ್ಲದೆ ಕೇಂದ್ರದಲ್ಲಿನ ಎನ್‌ಡಿಎ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಜೋಸೆಫ್ ಅವರು, ಕೇಂದ್ರ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕೆಂದು ತಾಕೀತು ಮಾಡಿದ್ದರು. ಆದರೆ ಅಂತಿಮವಾಗಿ ಸುಪ್ರೀಂ ಕೋರ್ಟ್, ಜೋಸೆಫ್ ನೇತೃತ್ವದ ಪೀಠದ ತೀರ್ಪಿಗೆ ತಡೆಯಾಜ್ಞೆ ನೀಡಿತ್ತು.