ಭೋಪಾಲ್: ಮನೆಯಲ್ಲಿದ್ದ ಮೊಬೈಲ್ ಫೋನ್ ಕದ್ದೊಯ್ದ ಮಂಗನ ವಿರುದ್ಧ ಮಧ್ಯ ಪ್ರದೇಶದ ಶಾಡೋಲ್ ಜಿಲ್ಲೆಯ ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಘಟನೆ ನಡೆದಿದೆ.
ಶಾಡೋನ್ ಜಿಲ್ಲೆಯ ಗರೋಲಾ ಕಾಲೋನಿಯ ನಿವಾಸಿಯಾದ ಪಾರ್ವತಿ ಬಹ್ರಾನಿ ದೂದು ನೀಡಿದ ಮಹಿಳೆ. ಪಾರ್ವತಿ ತನ್ನ ಮನೆಯ ವರಾಂಡಾದಲ್ಲಿ ಕೆಲಸ ಮಾಡುತ್ತಾ ಕುಳಿತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಮಂಗವೊಂದು ಅವರ ಮೊಬೈಲ್ ಫೋನ್ ತೆಗೆದುಕೊಂಡಿದೆ. ಮಂಗನಿಂದ ಮೊಬೈಲ್ ಫೋನ್ ಬಿಡಿಸಿಕೊಳ್ಳಲು ಪಾರ್ವತಿ ಪ್ರಯತ್ನಿಸಿದ್ದಾರೆ. ಆದರೆ ಮಂಗ ಅವರನ್ನು ಹೆದರಿಸಿ ಮೊಬೈಲ್ ಫೋನ್ನೊಂದಿಗೆ ಪರಾರಿಯಾಗಿದೆ.
ಈ ಸಂಬಂಧ ಪಾರ್ವತಿ, ಕೋಟವಾಲಿ ಪೊಲೀಸ್ ಠಾಣೆಗೆ ತೆರಳಿ ಮೊಬೈಲ್ ಕಳ್ಳತನದ ದೂರು ದಾಖಲಿಸಿದ್ದಾರೆ. ಆದರೆ ಮಂಗನ ವಿರುದ್ಧ ದೂರು ದಾಖಲಿಸಿಕೊಳ್ಳದ ಪೊಲೀಸರು ಮೊಬೈಲ್ ಫೋನ್ ಕಳ್ಳತನ ಆಗಿದೆಯಾ ಇಲ್ಲವಾ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.