ಪುಣೆ: ಪುಣೆ ಫಿಲ್ಮ್ ಇನ್ಸಿಟ್ಯೂಟ್ (ಎಫ್‌ಟಿಐಐ)ಗೆ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಕನಯ್ಯಾ ಕುಮಾರ್ ಭೇಟಿ ನೀಡಲು ಅವಕಾಶ ನೀಡಬಾರದು ಎಂಬ ಬೆದರಿಕೆ ಪತ್ರದೊಂದಿದೆ ಸ್ಫೋಟಕ ವಸ್ತುಗಳೆಂದು ಶಂಕಿಸಲಾಗುವ ವಸ್ತುಗಳ ಪೊಟ್ಟಣವೊಂದು ಎಫ್‌ಟಿಐಐ
ಶನಿವಾರ ಸಂಜೆ ಪ್ರಸ್ತುತ ಇನ್ಸಿಟ್ಯೂಟ್‌ನ ನಿರ್ದೇಶಕ ಭುಪೇಂದ್ರ ಕಾಯಿಂತೋಲಾ ಅವರ ಕಚೇರಿ ವಿಳಾಸಕ್ಕೆ ಈ ಪೊಟ್ಟಣ ಲಭಿಸಿದೆ. ಈ ಪೊಟ್ಟಣದಲ್ಲಿ ಕನಯ್ಯಾ ಕುಮಾರ್‌ನ್ನು ಎಫ್‌ಟಿಐಐ ಕ್ಯಾಂಪಸ್‌ನೊಳಗೆ ಬಿಡಬಾರದು ಎಂಬ ಬೆದರಿಕೆ ಪತ್ರ ಮತ್ತು ಸ್ಫೋಟಕ ವಸ್ತು ಎಂದು ಶಂಕಿಸಲ್ಪಡುವ ಬಿಳಿ ಪುಡಿ ಸಿಕ್ಕಿದೆ.
ಕನಯ್ಯಾ ಕುಮಾರ್ ಎಫ್‌ಟಿಐಐ ಇನ್ಸಿಟ್ಯೂಟ್‌ಗೆ ಭೇಟಿ ನೀಡುತ್ತೇನೆ ಎಂದು ಕಳೆದ ತಿಂಗಳು ಹೇಳಿದ್ದರು. ಆದರೆ ದೇಶದ್ರೋಹ ಆರೋಪವಿರುವ ಆತನನ್ನು ಕ್ಯಾಂಪಸ್‌ಗೆ ಬರಲು ಬಿಡಬಾರದು ಮತ್ತು ಆತ ಇಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ಇಂಥಾ ವಿಷಯಗಳಿಗೆ ಇನ್ಸಿಟ್ಯೂಟ್ ಪ್ರೋತ್ಸಾಹ ನೀಡಬಾರದೆಂದು ಬೆದರಿಕೆ ಪತ್ರದಲ್ಲಿದೆ.
ಏಪ್ರಿಲ್ 24ಕ್ಕೆ ಕನಯ್ಯಾ ಎಫ್‌ಟಿಐಐ ಕ್ಯಾಂಪಸ್‌ಗೆ ಭೇಟಿ ನೀಡುವವರಿದ್ದರು. ಆದರೆ ಪುಣೆಯಲ್ಲಿ ಸಮಾರಂಭವೊಂದರಲ್ಲಿ ಭಾಷಣ ಮಾಡಿ ಹೋಗಿದ್ದ ಕನಯ್ಯಾ ಎಫ್‌ಟಿಟಿಐಗೆ ಭೇಟಿ ನೀಡಲಿಲ್ಲ.
ಇದೀಗ ಪೊಟ್ಟಣದಲ್ಲಿ ಸಿಕ್ಕಿದ ವಸ್ತು ಏನು ಎಂಬುದನ್ನು ಪತ್ತೆ ಹಚ್ಚಲು, ಆ ವಸ್ತುವನ್ನು ತಜ್ಞರಿಗೆ ಕಳುಹಿಸಿಕೊಡಲಾಗಿದೆ.