ಪುಣೆ: ಭೂಮಾತಾ ಬ್ರಿಗೇಡ್ ನ ಅಧ್ಯಕ್ಷೆ ತೃಪ್ತಿ ದೇಸಾಯಿ ಅವರನ್ನು ಭೇಟಿ ಮಾಡಲು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಒಪ್ಪಿಗೆ ಸೂಚಿಸಿದ್ದಾರೆ.
ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ದೇವಾಲಯಗಳಲ್ಲಿ ಪ್ರವೇಶ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ತೃಪ್ತಿ ದೇಸಾಯಿ, ಆರ್ ಎಸ್ಎಸ್ ನಲ್ಲೂ ಮಹಿಳೆಯರಿಗೆ ಸದಸ್ಯತ್ವ ಪಡೆಯಲು ಅವಕಾಶ ನೀಡಬೇಕೆಂದು ಆಗ್ರಹಿಸಿ, ಈ ವಿಷಯದ ಕುರಿತು ಚರ್ಚೆ ನಡೆಸಲು ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ ಅವರ ಭೇಟಿ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದರು.
ತೃಪ್ತಿ ದೇಸಾಯಿಯವರನ್ನು ಭೇಟಿ ಮಾಡಲು ಮೋಹನ್ ಭಾಗವತ್ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಪ್ರಸ್ತುತ ಆರ್ ಎಸ್ ಎಸ್ ನ ವಿವಿಧ ಕ್ಯಾಂಪ್ ಗಳಲ್ಲಿ ಕಾರ್ಯನಿರತರಾಗಿರುವುದರಿಂದ ಜೂನ್ ನಂತರ ತೃಪ್ತಿ ದೇಸಾಯಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಷ್ಟ್ರೀಯ ಸಂವಹನ ವಿಭಾಗದ ಮುಖ್ಯಸ್ಥ ಅನಿರುದ್ಧ್ ದೇಶಪಾಂಡೆ ತಿಳಿಸಿದ್ದಾರೆ.
ಮಹಿಳೆಯರಿಗೆ ದೇವಾಲಯ ಪ್ರವೇಶ ಹಾಗೂ ಆರ್ ಎಸ್ ಎಸ್ ನಲ್ಲಿ ಸಕ್ರಿಯವಾಗಿರುವ ಅವಕಾಶ ನೀಡುವ ಬೇಡಿಕೆಗಳ ಬಗ್ಗೆ ಆರ್ ಎಸ್ ಎಸ್ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂಬ ವಿಶ್ವಾಸವಿದೆ ಎಂದು ತೃಪ್ತಿ ದೇಸಾಯಿ ತಿಳಿಸಿದ್ದಾರೆ.