ನವದೆಹಲಿ: ನವೀಕರಿಸಬಹುದಾದ ಇಂಧನ ಕ್ಷೇತ್ರದ ಕೆಲವು 'ಅಸಮಂಜಸ' ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ವಿಶ್ವ ವಾಣಿಜ್ಯ ಸಂಸ್ಥೆ(ಡಬ್ಲ್ಯೂಟಿಒ)ಯ ಒಪ್ಪಂದ ಉಲ್ಲಂಘಿಸಿದ ಅಮೆರಿಕದ ವಿರುದ್ಧ ಭಾರತ 16 ಪ್ರಕರಣಗಳನ್ನು ದಾಖಲಿಸಲಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಸಂಸತ್ತಿಗೆ ತಿಳಿಸಿದೆ.
ಈ ಬಗ್ಗೆ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸಿತಾರಾಮನ್ ಅವರು, ಡಬ್ಲ್ಯೂಟಿಒ ಒಪ್ಪಂದ ಉಲ್ಲಂಘಿಸಿದ ಅಮೆರಿಕ ವಿರುದ್ಧ ಭಾರತ 15 ಕೇಸ್ ಗಳನ್ನು ದಾಖಲಿಸಲು ಮುಂದಾಗಿದೆ ಎಂದರು.
ಅಮೆರಿಕದ ಕೆಲವು ನವೀಕರಿಸಬಹುದಾದ ಇಂಧನ ಕಾರ್ಯಕ್ರಮಗಳು ಉಪ ಒಕ್ಕೂಟ ಹಂತದಲ್ಲಿ ಅಸಮಂಜಸವಾಗಿವೆ ಎಂದು ಭಾರತ ಭಾವಿಸಿದೆ. ವಿಶೇಷವಾಗಿ 1994ರ ಡಬ್ಲ್ಯುಟಿಒ.ನ ಬಹು ಮುಖ್ಯ ಒಪ್ಪಂದವಾದ ಗ್ಯಾಟ್ಸ್ (General Agreement on Trade in Services) ಹಾಗೂ ಟ್ರಿಮ್ಸ್ (ಟ್ರೇಡ್-ಸಂಬಂಧಿತ ಹೂಡಿಕೆ ಅಳತೆಗಳ) ಒಪ್ಪಂದದ ನಿಬಂಧನೆಗಳು ಅಸಮಂಜಸ ಎಂದರು.