ದೇಶ

ಕೇರಳ ಮೋದಿಯಿಂದ ಕ್ಷಮಾಪಣೆ ಬಯಸುತ್ತದೆ, ಮೌನವನ್ನಲ್ಲ: ಚಾಂಡಿ

Guruprasad Narayana

ತಿರುವನಂತಪುರಂ: ಕೇರಳವನ್ನು ಸೋಮಾಲಿಯಾಗೆ ಹೋಲಿಸಿದ್ದಕ್ಕೆ, ಪ್ರಧಾನಿ ನರೇಂದ್ರ ಮೋದಿ ಅವರಿಂದ ರಾಜ್ಯ ಕ್ಷಮಾಪಣೆ ಬಯಸುತ್ತದೆ, ಮೌನವಲ್ಲ ಎಂದು ಕೇರಳ ಮುಖ್ಯಮಂತ್ರಿ ಉಮನ್ ಚಾಂಡಿ ಗುರುವಾರ ಹೇಳಿದ್ದಾರೆ.

"ಮೋದಿ ತಮ್ಮ ಹೇಳಿಕೆಯನ್ನು ಹಿಂಪಡೆಯದೆ ಕಳೆದ ರಾತ್ರಿ ಕೇರಳ ತೊರೆದಿದ್ದಾರೆ. ಪ್ರಧಾನಿಯವರ ಈ ಪ್ರತಿಕ್ರಿಯೆಗೆ ವಿಶ್ವದಾದ್ಯಂತ ಮಲೆಯಾಳಿಗಳು ಬೇಸರಗೊಂಡಿದ್ದಾರೆ" ಎಂದು ಫೇಸ್ಬುಕ್ ನಲ್ಲಿ ಚಾಂಡಿ ಬರೆದಿದ್ದಾರೆ.

ಭಾರತೀಯ ಜನತಾ ಪಕ್ಷದ ಸಾರ್ವಜನಿಕ ಚುನಾವಣಾ ಸಭೆಯಲ್ಲಿ ಮೋದಿ ನೀಡಿದ ಹೇಳಿಕೆಯ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ.

"ಮಲೆಯಾಳಿಗಳ ಆತ್ಮಗೌರವಕ್ಕೆ ಧಕ್ಕೆ ತಂದ ನಂತರ, ಯಾರೂ ಪ್ರಧಾನಿಯವರಿಂದ ಮೌನವನ್ನು ನಿರೀಕ್ಷಿಸಿರಲಿಲ್ಲ. ಬದಲಾಗಿ ಅವರು ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡು ಕ್ಷಮೆ ಯಾಚಿಸುತ್ತಾರೆ ಎಂದೇ ಎಲ್ಲರು ನಿರೀಕ್ಷಿಸಿದ್ದರು. ಪ್ರಧಾನಿಯವರ ಕ್ಷಮಾಪಣೆಗೆ ಕೇರಳದ ನಿರೀಕ್ಷೆ ಮುಂದುವರೆದಿದೆ" ಎಂದು ಚಾಂಡಿ ಹೇಳಿದ್ದಾರೆ.

"ಕೇರಳದಲ್ಲಿ ಪರಿಶಿಷ್ಟ ಪಂಗಡಗಳ ಮಕ್ಕಳ ಸಾವಿನ ಅನುಪಾತ ಸೊಮಾಲಿಯಾಗಿಂತಲೂ ಕಳವಳಕಾರಿ" ಎಂದಿದ್ದ ಭಾನುವಾರದ ಮೋದಿ ಅವರ ಹೇಳಿಕೆ ಭಾರಿ ವಿರೋಧಕ್ಕೆ ಗ್ರಾಸವಾಗಿತ್ತು.

ತಮ್ಮ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸದೆ ಬುಧವಾರ ಕೂಡ ಮೋದಿ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮತ್ತು ಸಿ ಪಿ ಐ (ಎಂ) ನೇತೃತ್ವದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಮೇಲೆ ವಾಗ್ದಾಳಿ ಮುಂದುವರೆಸಿದ್ದರು.

ಕೇರಳದ ಬಗ್ಗೆ ಆಧಾರರಹಿತ ಮಾತುಗಳನ್ನಾಡಿ ಪ್ರಧಾನಿ ಪಟ್ಟಕ್ಕೆ ಅಗೌರವ ತರಬೇಡಿ ಎಂದು ಕೂಡ ಈ ಹಿಂದೆ ಚಾಂಡಿ ಬರೆದಿದ್ದರು.

ಕೇರಳದಲ್ಲಿ ಎಂದಿಗೂ ವಿಧಾನಸಭಾ ಅಥವಾ ಲೋಕಸಭಾ ಸ್ಥಾನವನ್ನು ಗೆಲ್ಲಲು ಸಾಧ್ಯವಾಗದ ಬಿಜೆಪಿ ತನ್ನ ನಾಯಕನನ್ನು ಸಮರ್ಥಿಸಿಕೊಳ್ಳುವ ಪ್ರಯತ್ನದಲ್ಲಿದೆ.

SCROLL FOR NEXT