ದೇಶ

ಪಂಚವಾರ್ಷಿಕ ಯೋಜನೆಯ ಬದಲಿಗೆ 15 ವರ್ಷಗಳ ವಿಷನ್ ಡಾಕ್ಯುಮೆಂಟ್

Sumana Upadhyaya

ನವದೆಹಲಿ: ಯೋಜನಾ ಆಯೋಗವನ್ನು ನೀತಿ ಆಯೋಗವನ್ನಾಗಿ ಬದಲಾಯಿಸಿದ ನಂತರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪಂಚ ವಾರ್ಷಿಕ ಯೋಜನೆಯನ್ನು 15 ವರ್ಷಗಳ ವಿಷನ್ ಡಾಕ್ಯುಮೆಂಟ್(ದೂರದೃಷ್ಟಿ ಯೋಜನೆ) ಆಗಿ ಬದಲಿಸಲು ನಿರ್ಧರಿಸಿದೆ.

ಸುಸ್ಥಿರ ಬೆಳವಣಿಗೆಯ ಹಿಂದೆ ಸರಿಯದೆ ದೇಶದ ಸಾಮಾಜಿಕ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಹೊಸ ವಿಷನ್ ಡಾಕ್ಯುಮೆಂಟ್ ಗಳನ್ನು ತಯಾರಿಸಲಾಗುತ್ತದೆ. ನೀತಿ ಆಯೋಗಕ್ಕೆ ಈ ದಾಖಲೆಗಳನ್ನು ತಯಾರಿಸುವ ಕೆಲಸ ನಿರ್ವಹಿಸಲಾಗಿದೆ.

2012ರಿಂದ 2017ರವರೆಗಿನ 12ನೇ ಪಂಚ ವಾರ್ಷಿಕ ಯೋಜನೆ ಮುಂದಿನ ವರ್ಷ ಕೊನೆಗೊಂಡ ನಂತರ 15 ವರ್ಷಗಳ ವಿಷನ್ ಡಾಕ್ಯುಮೆಂಟ್ ಜಾರಿಗೆ ಬರಲಿದೆ. ರಾಷ್ಟ್ರೀಯ ಅಭಿವೃದ್ಧಿ ಅಜೆಂಡಾ ಹೆಸರಿನಲ್ಲಿ ಮುಂದಿನ ವರ್ಷದಿಂದ ಆರಂಭವಾಗಲಿದ್ದು, ಅದರಲ್ಲಿ ಆಂತರಿಕ ಭದ್ರತೆ ಮತ್ತು ರಕ್ಷಣಾ ಇಲಾಖೆ, ಯೋಜನೆಗಳು, ಕಾರ್ಯಕ್ರಮಗಳು, ದೀರ್ಘಾವಧಿಯ ಕಾರ್ಯಸೂಚಿಗಳು ಸೇರಿವೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಪರಾಮರ್ಶಿಸಲಾಗುವುದು.

ನಮ್ಮ ದೇಶದಲ್ಲಿ ಪಂಚ ವಾರ್ಷಿಕ ಯೋಜನೆಯನ್ನು 1951ರಲ್ಲಿ ಮಾಜಿ ಪ್ರಧಾನಿ ದಿವಂಗತ ಜವಹರಲಾಲ್ ನೆಹರೂರವರು ಜಾರಿಗೆ ತಂದಿದ್ದರು. ಆದರೆ ಇಂದು ದೇಶದ ಆರ್ಥಿಕ, ಸಾಮಾಜಿಕ ಅಗತ್ಯಗಳು, ಬೆಳವಣಿಗೆಗೆ ಅನುಗುಣವಾಗಿ ವಿಷನ್ ಡಾಕ್ಯುಮೆಂಟನ್ನು ಜಾರಿಗೆ ತರುತ್ತಿದೆ.

SCROLL FOR NEXT