ದೇಶ

ಕ್ರಿಮಿನಲ್ ಮಾನನಷ್ಟ ಕಾನೂನಿನ ಮೌಲ್ಯವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್

Sumana Upadhyaya

ನವದೆಹಲಿ: ಅಪರಾಧ ಮಾನನಷ್ಟ ಕಾನೂನು ಸಿಂಧು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಮಾನನಷ್ಟ ಮೊಕದ್ದಮೆಗೆ ಸಂಬಂಧಪಟ್ಟ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಮತ್ತು 500 ನ ಸಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಬಿಜೆಪಿ ನಾಯಕ ಸುಬ್ರಹ್ಮಣ್ಯ ಸ್ವಾಮಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಪಟ್ಟಂತೆ ನ್ಯಾಯಾಲಯ ಇಂದು ಈ ತೀರ್ಪು ನೀಡಿದೆ.

ವಿವಿಧ ಹೈಕೋರ್ಟ್ ಗಳಲ್ಲಿ ಬಾಕಿ ಉಳಿದಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವಂತೆ ಅಥವಾ ವಿಚಾರಣೆ ಎದುರಿಸಲು ಈ ಮೂವರೂ ರಾಜಕೀಯ ನಾಯಕರಿಗೆ ಸುಪ್ರೀಂ ಕೋರ್ಟ್ 8 ವಾರಗಳ ಕಾಲಾವಕಾಶ ನೀಡಿದೆ.

ನ್ಯಾಯಾಲಯದ ಈ ಕಾನೂನು ವಾಕ್ ಸ್ವಾತಂತ್ರ್ಯಕ್ಕೆ ಯಾವುದೇ ಋಣಾತ್ಮಕ ಪರಿಣಾಮ ಬೀರುವುದಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ, ಮಾತನಾಡುವ ಹಕ್ಕು ಇದೆ. ಹಾಗೆಂದ ಮಾತ್ರಕ್ಕೆ ಬೇರೆಯವರ ಗೌರವಕ್ಕೆ ಹಾನಿಯನ್ನುಂಟುಮಾಡಲು ಸ್ವಾತಂತ್ರ್ಯವಿದೆ ಎಂಬರ್ಥವಲ್ಲ. ವ್ಯಕ್ತಿ ತನ್ನ ಗೌರವವನ್ನು ಕಾಪಾಡಿಕೊಳ್ಳುವ ಹಕ್ಕನ್ನು ಸಂವಿಧಾನದ 21ನೇ ಪರಿಚ್ಛೇದದಡಿ ಕೊಡಲಾಗಿದೆ.

ಖಾಸಗಿ ಮಾನನಷ್ಟ ಕೇಸುಗಳಿಗೆ ಸಂಬಂಧಪಟ್ಟಂತೆ ಸಮನ್ಸ್ ಜಾರಿ ಮಾಡುವಾಗ ತುಂಬಾ ಜಾಗರೂಕರಾಗಿರುವಂತೆ ದೇಶಾದ್ಯಂತದ ಮ್ಯಾಜಿಸ್ಟ್ರೇಟ್ ಗಳಿಗೆ ಆದೇಶ ನೀಡಲಾಗಿದೆ ಎಂದು ಕೋರ್ಟ್ ಹೇಳಿದೆ.

SCROLL FOR NEXT