ನವದೆಹಲಿ: 2008ರ ಮಾಲೇಂಗಾವ್ ಸ್ಫೋಟ ಪ್ರಕರಣದಲ್ಲಿ ಸಾಧ್ವಿ ಪ್ರಗ್ಯಾ ಮತ್ತು ಇನ್ನಿತರ 5 ಮಂದಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕ್ಲೀನ್‌ಚೀಟ್ ನೀಡುವ ಮೂಲಕ ಬಿಜೆಪಿ ಸರ್ಕಾರ ಆರೆಸ್ಸೆಸ್ ಮತ್ತು ಅವರ ನಾಯಕರನ್ನು ರಕ್ಷಿಸಲೆತ್ನಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ (ಆಪ್) ಆರೋಪಿಸಿದೆ.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೇರಿದ ನಂತರ ಆರೆಸ್ಸೆಸ್ ಮತ್ತು ಇನ್ನಿತರ ಹಿಂದೂ ಸಂಘಟನೆಗಳ ಸದಸ್ಯರಾಗಿದ್ದು ಉಗ್ರರೆಂದು ಆರೋಪವಿರುವ ವ್ಯಕ್ತಿಗಳನ್ನು ಬಿಜೆಪಿ ರಕ್ಷಿಸಲೆತ್ನಿಸುತ್ತಿದೆ ಎಂದು ಆಪ್ ನಾಯಕ ಆಶಿಶ್ ಕೇತನ್ ಹೇಳಿದ್ದಾರೆ.
ಮಾಲೇಂಗಾವ್ ಪ್ರಕರಣದ ಆರೋಪಪಟ್ಟಿಯಿಂದ ಸಾಧ್ವಿ ಪ್ರಗ್ಯಾರನ್ನು ಕೈಬಿಟ್ಟು, ಹುತಾತ್ಮ ಹೇಮಂತ್ ಕರ್ಕರೆಯವರ ತನಿಖೆಯು ಅಪ್ರಾಮಾಣಿಕ ಎಂದು ಹೇಳುವ ಮೂಲಕ ಎನ್‌ಐಎ ಆತನನ್ನು ಅವಮಾನಿಸಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಧಾನ ಕಚೇರಿಯಲ್ಲಿ ಅಡಗಿ ಕುಳಿತಾಗ, ಹೇಮಂತ್ ಕರ್ಕರೆ ಮಾತ್ರ ಹೊರಗೆ ಹೋಗಿ ಉಗ್ರರೊಂದಿಗೆ ಹೋರಾಡಿ ಹುತಾತ್ಮನಾಗಿದ್ದ. ಆತನ ತನಿಖಾ ವರದಿಯನ್ನು ಅಪ್ರಾಮಾಣಿಕ ಎಂದು ಹೇಳುವ ಮೂಲಕ ಕರ್ಕರೆಯನ್ನು ಎನ್‌ಐಎ ಅವಮಾನಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಎನ್‌ಐಎ ಕ್ಷಮೆಯಾಚಿಸಬೇಕೆಂದು ಕೇತನ್ ಒತ್ತಾಯಿಸಿದ್ದಾರೆ.
ಅದೇ ವೇಳೆ ಮೆಕ್ಕಾ ಮಸೀದಿ ಬಾಂಬ್ ಸ್ಫೋಟ ಪ್ರಕರಣವನ್ನು ಎನ್‌ಐಎಯಿಂದ ಸಿಬಿಐಗೆ ವರ್ಗಾವಣೆ ಮಾಡಲಾಗಿತ್ತು. ಆ ಪ್ರಕರಣದಲ್ಲಿ ಆರೆಸ್ಸೆಸ್‌ನ ಸದಸ್ಯರು ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿತ್ತು, ಆ ಬಗ್ಗೆ ತನಿಖೆಯಾಗಬೇಕು ಎಂದು ಕೇತನ್ ಹೇಳಿದ್ದಾರೆ.