ಬಿಹಾರ: ಬಿಹಾರ ಸರ್ಕಾರ ಹೇರಿರುವ ಮದ್ಯ ನಿಷೇಧ ಆದೇಶಕ್ಕೆ ಸೆಡ್ಡು ಹೊಡೆದರೆಂಬ ಆರೋಪ ಎದುರಿಸುತ್ತಿರುವ ಜೆಡಿಯುನ ಮಾಜಿ ಎಂಎಲ್ ಸಿ ಮನೋರಮಾ ದೇವಿ ಜಾಮೀನು ಅರ್ಜಿಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
ಗಯಾ ನ್ಯಾಯಾಲಯ ಪ್ರಕರಣದ ಪೂರ್ಣ ವಿವರ ಮತ್ತು ಕೆಳ ನ್ಯಾಯಾಲಯದ ದಾಖಲೆಗಳನ್ನು ಕೇಳಿದ್ದು, ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿದೆ.
ಎಫ್ ಐಆರ್ ನಲ್ಲಿ ಮನೋರಮಾ ದೇವಿ ಹೆಸರಿಲ್ಲ. ಅವರ ಮೇಲೆ ಸುಳ್ಳು ಆರೋಪ ಮಾಡಲಾಗಿದೆ ಎಂದು ಪರ ವಕೀಲರು ವಾದ ಮಂಡಿಸಿದ್ದಾರೆ. ಮೇ 13ರಂದು ಮನೋರಮಾ ದೇವಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ಬಿಹಾರ ಸರ್ಕಾರ ಹೇರಿರುವ ಮದ್ಯ ನಿಷೇಧ ಆದೇಶಕ್ಕೆ ಸೆಡ್ಡು ಹೊಡೆದರೆಂಬ ಆರೋಪದ ಮೇಲೆ ಮನೋರಮಾ ದೇವಿ ವಿರುದ್ಧ ನಿತೀಶ್ ಕುಮಾರ್ ಸರ್ಕಾರ ಅರೆಸ್ಟ್ ವಾರೆಂಟ್ ಹೊರಡಿಸಿತ್ತು. ಇದಕ್ಕೆ ಮುನ್ನ ಕೊಲೆ ಆರೋಪಿಯಾಗಿರುವ ತನ್ನ ಪುತ್ರನಿಗೆ ರಕ್ಷಣೆ ನೀಡಿದರೆಂಬ ಕಾರಣಕ್ಕೆ ಮನೋರಮಾ ಅವರನ್ನು ಪಕ್ಷದಿಂದ (ಜೆಡಿಯು) ಅಮಾನತು ಮಾಡಲಾಗಿತ್ತು. ಈ ಬೆಳವಣಿಗೆಗಳನ್ನು ಅನುಸರಿಸಿ ಮನೋರಮಾ ಅವರು ಒಡನೆಯೇ ನಾಪತ್ತೆಯಾಗಿದ್ದರು.
ಪಟ್ನಾದಿಂದ ನೂರು ಕಿ.ಮೀ.ದೂರದಲ್ಲಿರುವ ಗಯಾ ಜಿಲ್ಲೆಯಲ್ಲಿನ ಮನೋರಮಾ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದ ಪೊಲೀಸರಿಗೆ ಹಲವಾರು ದೇಶೀ ನಿರ್ಮಿತ ಫಾರೀನ್ ಲಿಕ್ಕರ್ ಬಾಟಲುಗಳು ಸಿಕ್ಕಿದ್ದವು. ರಾಜ್ಯ ಸರ್ಕಾರದ ಮದ್ಯ ನಿಷೇಧ ಕಾಯಿದೆಯನ್ವಯ ಇದು ಅಪರಾಧವೆನಿಸುತ್ತದೆ.
ಕಳೆದ ಮೇ 7ರ ರಾತ್ರಿ ಗಯಾ ಪೊಲೀಸ್ ಲೈನ್ಸ್‌ನಲ್ಲಿ ಕಾರು ಓವರ್‌ಟೇಕ್ ಮಾಡಲಾದ ಪ್ರಕರಣದಲ್ಲಿ 19ರ ಹರೆಯದ ಶಾಲಾ ವಿದ್ಯಾರ್ಥಿಯನ್ನು ಗುಂಡಿಕ್ಕಿ ಕೊಂದ ಆರೋಪದ ಮೇಲೆ ಮನೋರಮಾ ದೇವಿ ಅವರ ಪುತ್ರ ರಾಕಿ ಮತ್ತು ಪತಿಯನ್ನು ಪೊಲೀಸರು ಬಂಧಿಸಿದ್ದರು.