ನವದೆಹಲಿ: ಕೆಲ ತಿಂಗಳ ಹಿಂದಷ್ಟೇ ಇಸಿಸ್ ಉಗ್ರಗಾಮಿ ಸಂಘಟನೆಯ ಭಾರತ ವಿಭಾಗದ ನೇಮಕಾತಿದಾರ ಶಫಿ ಅರ್ಮರ್ ಡ್ರೋನ್ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ಹರಡಿತ್ತು. ಆದರೀಗ ಈ ಸುದ್ದಿ ಸುಳ್ಳು ಎಂದು ಹೇಳಲಾಗುತ್ತಿದ್ದು, ಅಂದು ಸಾವನ್ನಪ್ಪಿದ ಶಫಿ ಅರ್ಮರ್ ಬದುಕಿದ್ದು, ನೇಮಕಾತಿಯಲ್ಲಿ ತಲ್ಲೀನನಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ಭಯೋತ್ಪಾದನಾ ನಿಗ್ರಹ ಘಟಕದ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಇಸಿಸ್ ಭಾರತ ನೇಮಕಾತಿದಾರ ಶಫಿ ಅರ್ಮರ್ ಬದುಕಿದ್ದಾನೆ ಮತ್ತು ಭಾರತದಲ್ಲಿ ಸಂಘಟನೆಯ ಅಸ್ತಿತ್ವಕ್ಕಾಗಿ ಸಿರಿಯಾದಲ್ಲಿದ್ದುಕೊಂಡೇ ಕಾರ್ಯಾಚರಣೆ ನಡೆಸುತ್ತಿದ್ದಾನೆ ಎಂದು ಹೇಳಿದ್ದಾರೆ.
"‘ಕೆಲವು ಸಾಮಾಜಿಕ ಜಾಲತಾಣಗಳು ಅರ್ಮರ್ ಸಾವಿನ ಬಗ್ಗೆ ಪ್ರಕಟಿಸಿದ್ದವು. ಆದರೆ ನಮಗೆ ದೊರೆತಿರುವ ಮಾಹಿತಿಗಳ ಪ್ರಕಾರ ಆತ ಈಗಲೂ ಭಾರತದಲ್ಲಿ ನೂತನ ನೇಮಕಾತಿಗಳಿಗೆ ಯತ್ನಿಸುತ್ತಿದ್ದಾನೆ. ಆತನ ಸಂಪರ್ಕಕ್ಕೆ ಬಂದ ಇಂತಹ ವ್ಯಕ್ತಿಗಳ ಮೇಲೆ ಭದ್ರತಾ ಸಂಸ್ಥೆಗಳು ನಿಗಾ ಇರಿಸಿವೆ’ ಎಂದು ಹೆಸರು ಹೇಳಲು ಇಚ್ಛಿಸದ ಕೇಂದ್ರೀಯ ಭಯೋತಾದಕ ನಿಗ್ರಹ ತಂಡದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೂಲತಃ ಕರ್ನಾಟಕದ ಭಟ್ಕಳ ಮೂಲದವನಾದ ಅರ್ಮರ್ ಅಲಿಯಾಸ್ ಯೂಸುಫ್ ಅಲ್-ಹಿಂದಿ ಕಳೆದ ಏಪ್ರಿಲ್ ನಲ್ಲಿ ಅಮೆರಿಕ ನಡೆಸಿದ ಡ್ರೋಣ್ ದಾಳಿಯಲ್ಲಿ ಹತನಾಗಿದ್ದ ಎಂದು ವರದಿಯಾಗಿತ್ತು. ಇದೀಗ ಆ ವರದಿಯನ್ನು ಅಲ್ಲಗಳೆಯಲಾಗಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮತ್ತು ಜಾಗೃತಾ ದಳದ ಮೂಲಗಳ ಪ್ರಕಾರ ಆರ್ಮರ್ ಪ್ರಸ್ತುತ ಸಿರಿಯಾದ ಐಸಿಸ್ ಆಕ್ರಮಿತ ಪ್ರದೇಶಗಳಿಂದ ತನ್ನ ಕಾರ್ಯಾಚರಣೆ ನಡೆಸುತ್ತಿದ್ದಾನೆ. ಸೆರೆ ಸಿಕ್ಕಿರುವ ಹಲವಾರು ಮಂದಿ ಭಯೋತ್ಪಾದಕ ಸಂಘಟನೆಯ ಬೆಂಬಲಿಗರು ತಮ್ಮೊಂದಿಗೆ ಸಂಪರ್ಕ ಸಾಧಿಸಿರುವ ವ್ಯಕ್ತಿ ತನ್ನನ್ನು ಭಟ್ಕಳದ ಯೂಸುಫ್ ಅಲ್-ಹಿಂದಿ ಎಂಬುದಾಗಿ ಪರಿಚಯಿಸಿಕೊಂಡಿದ್ದಾನೆ ಎಂದು ತನಿಖಾ ತಂಡಕ್ಕೆ ತಿಳಿಸಿದ್ದಾರೆ.
ನಿಷೇಧಿತ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಸದಸ್ಯನಾಗಿ ತನ್ನ ಭಯೋತ್ಪಾದಕ ಚಟುವಟಿಕೆಗಳನ್ನು ಆರಂಭಿಸಿದ್ದ ಅರ್ಮರ್, 2009ರಲ್ಲಿ ಸಂಘಟನೆಯ ಉನ್ನತ ಪದಾಧಿಕಾರಿಗಳಾದ ರಿಯಾಜ್, ಇಕ್ಬಾಲ್ ಭಟ್ಕಳ, ಶಾನವಾಜ್ ಆಲಂ, ಮೊಹಮ್ಮದ್ ಸಾಜಿದ್ ಮತ್ತು ಸಹೋದರ ಸುಲ್ತಾನ್ ಅರ್ಮರ್ ಮತ್ತಿತರರೊಂದಿಗೆ ಪಾಕಿಸ್ತಾನಕ್ಕೆ ಪರಾರಿಯಾಗಿದ್ದ.