ಅಹ್ಮದಾಬಾದ್: 14 ವರ್ಷಗಳ ಬಳಿಕ 2002ರ ಗೋದ್ರಾ ರೈಲು ಹತ್ಯಾಕಾಂಡದ ಪ್ರಧಾನ ರೂವಾರಿ ಫರೂಖ್ ಭಾನಾ ಅವರನ್ನು ಬಂಧಿಸುವಲ್ಲಿ ಗುಜರಾತ್ ಉಗ್ರ ನಿಗ್ರಹ ದಳ (ಎಟಿಎಸ್) ಬುಧವಾರ ಯಶಸ್ವಿಯಾಗಿದೆ.
ಬಂಧಿತ ಭಾನಾ ನಗರಸಭಾ ಮಾಜಿ ಸದಸ್ಯನಾಗಿದ್ದನು ಎಂದು ಪೊಲೀಸರು ಹೇಳಿದ್ದಾರೆ. ಪ್ರಸ್ತುತ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳಲ್ಲಿ ಭಾನಾ ಕೂಡಾ ಒಬ್ಬರು.
2002ರ ಫೆ. 27ರಂದು ಗೋದ್ರಾ ಬಳಿ ಸಬರ್‌ಮತಿ ಎಕ್ಸ್‌ಪ್ರೆಸ್ ರೈಲಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ರೈಲಿನಲ್ಲಿದ್ದ 59 ಕರಸೇವಕರು ಜೀವಂತ ದಹನವಾಗಿದ್ದರು.
ಗೋಧ್ರಾ ರೈಲು ದಾಳಿಯ ನಂತರ ಗುಜರಾತ್‌ನಲ್ಲಿ ಸಂಭವಿಸಿದ ಕೋಮುಗಲಭೆಯಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಹತ್ಯೆಗೀಡಾಗಿದ್ದರು.
ಕಳೆದ ವರ್ಷ ಇದೇ ಪ್ರಕರಣದ ಇನ್ನೊಬ್ಬ ಆರೋಪಿ ಕಸಂ ಇಬ್ರಾಹಿಂ ಭಾಮೆಡಿ ಎಂಬಾತನನ್ನು ಬಂಧಿಸಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ 31 ದೋಷಿಗಳಿಗೆ ಶಿಕ್ಷೆ ವಿಧಿಸಿತ್ತು. ಇದರಲ್ಲಿ 11 ಮಂದಿ ಗಲ್ಲು ಶಿಕ್ಷೆ ಮತ್ತು 20 ಮಂದಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿತ್ತು.