ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಎಐಎಡಿಎಂಕೆ ಪಕ್ಷಕ್ಕೆ ಭಾರಿ ಬಹುಮತ ನೀಡಿದ ಜನತೆಗೆ ಸಿಎಂ ಜಯಲಲಿತಾ ಅಭಿನಂದನೆ ಸಲ್ಲಿಸಿದ್ದಾರೆ.
ಇಂದು ಚೆನ್ನೈನಲ್ಲಿರುವ ತಮ್ಮ ಫೋಯಸ್ ಗಾರ್ಡನ್ ನಿವಾಸದಲ್ಲಿ ಫಲಿತಾಂಶದ ನೇರ ಪ್ರಸಾರ ವೀಕ್ಷಿಸಿದ ಜಯಲಲಿತಾ ಅವರು ಅಭಿಮಾನಿಗಳಿಗೆ, ಪಕ್ಷದ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪಕ್ಷದವತಿಯಿಂದ ಬಿಡುಗಡೆಯಾಗಿರುವ ಜಯಲಲಿತಾ ಅವರ ಅಧಿಕೃತ ಹೇಳಿಕೆಯಲ್ಲಿ, ಪ್ರಸ್ತುತ ಚುನಾವಣೆ ನಿಜವಾದ ಪ್ರಜಾಪ್ರಭುತ್ವ ಏನು ಎಂಬುದನ್ನು ಸಾಬೀತುಪಡಿಸಿದೆ. ತಮಿಳುನಾಡಿನ ಜನತೆ ಕುಟುಂಬ ರಾಜಕಾರಣವನ್ನು ತಿರಸ್ಕಿರಿಸಿದ್ದು, ನಿಜವಾದ ಪ್ರಜಾಪ್ರುಭತ್ವಕ್ಕೆ ಮತ ನೀಡಿದ್ದಾರೆ. ಮತದಾನೋತ್ತರ ಸಮೀಕ್ಷೆಗಳನ್ನೇ ನಂಬಿ ಕುಳಿತಿದ್ದವರು ಇಂದು ಸೋಲನ್ನು ಅನುಭವಿಸಿದ್ದಾರೆ ಎಂದು ಹೇಳಿದ್ದಾರೆ.
ತಮಿಳುನಾಡಿನ ಜನತೆ ತಮ್ಮ ಭರವಸೆ ಇಟ್ಟು ಐತಿಹಾಸಿಕ ಜಯ ನೀಡಿದ್ದಾರೆ. 1984ರ ನಂತರ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಎಐಎಡಿಎಂಕೆ ಪಕ್ಷವನ್ನು ಸತತ ಎರಡನೇ ಬಾರಿಗೆ ಆಯ್ಕೆ ಮಾಡಿದ್ದಾರೆ. ಚುನಾವಣಾ ಪೂರ್ವದಲ್ಲಿ ನಾವು ಘೋಷಣೆ ಮಾಡಿದ್ದ ಭರವಸೆಗಳನ್ನು ಶೀಘ್ರದಲ್ಲೇ ಈಡೇರಿಸುತ್ತೇವೆ ಎಂದು ಜಯಲಲಿತಾ ಹೇಳಿದ್ದಾರೆ. 1984ರಲ್ಲಿ ಎಂಜಿ ರಾಮಚಂದ್ರನ್ ಅವರು ಪಕ್ಷ ಸ್ಥಾಪನೆ ಮಾಡಿದ ಎಐಎಂಡಿಎಂಕೆ ಪಕ್ಷ ಆಗ ಸತತ ಎರಡು ಬಾರಿ ಅಧಿಕಾರದ ಗದ್ದುಗೇ ಏರಿತ್ತು. ಇದಾದ ಬಳಿಕ ಇದೇ ಮೊದಲ ಬಾರಿಗೆ ಜಯಲಲಿತಾ ಅವರ ನೇತೃತ್ವದಲ್ಲಿ ಎಐಎಡಿಎಂಕೆ ದಿಗ್ವಿಜಯ ಸಾಧಿಸಿದೆ.