ನವದೆಹಲಿ: ಕುಖ್ಯಾತ ಭಯೋತ್ಪಾದನಾ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ನ ಪ್ರಮುಖ ಉಗ್ರ ಅಬ್ದುಲ್ ವಾಹಿದ್ ಸಿದ್ದಿಬಾಪನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನ ಬಂಧಿಸಿದ್ದಾರೆ.
ದೇಶ ತೊರೆದು ಭಯೋತ್ಪಾದಕ ಚಟುವಟಿಕೆಯಲ್ಲಿ ನಿರತನಾಗಿದ್ದ ಅಬ್ದುಲ್ ವಾಹಿದ್ ಸಿದ್ದಿಬಾಪ ಇಂದು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಎನ್ ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಸಿದ್ದಿಬಾಪ ದೆಹಲಿ ಬರುವ ಕುರಿತು ಖಚಿತ ಮಾಹಿತಿ ಪಡೆದಿದ್ದ ಎನ್ ಐಎ ಅಧಿಕಾರಿಗಳು ಆತ ಮಾರುವೇಷದಲ್ಲಿರುವಾಗಲೇ ಆತನನ್ನು ಬಂಧಿಸಿದ್ದಾರೆ.
ಮೂಲತಃ ಕರ್ನಾಟಕದ ಭಟ್ಕಳ ಮೂಲದವನಾದ ಅಬ್ದುಲ್ ವಾಹಿದ್ ವೃತ್ತಿಯಲ್ಲಿ ಸುಗಂಧ ವ್ಯಾಪಾರಿಯಾಗಿದ್ದು, ಕುಖ್ಯಾತ ಭಯೋತ್ಪಾದಕ ಯಾಸಿನ್ ಭಟ್ಕಳ್ ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎಂದು ತಿಳಿದುಬಂದಿದೆ. 2008ರಲ್ಲಿ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಆರಂಭವಾದಾಗ ಸಂಘಟನೆ ಸೇರಿದ್ದ ಈತ ಬಳಿಕ ದುಬೈಗೆ ಹಾರಿದ್ದ. ದುಬೈನಲ್ಲಿ ಭೂಗತನಾಗಿ ಅಲ್ಲಿಂದಲೇ ಭಯೋತ್ಪಾದನಾ ಚಟುವಟಿಕೆಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ. ದುಬೈನಲ್ಲಿದ್ದುಕೊಂಡೇ ವಾಹಿದ್ ಸಂಘಟನೆ ಚಟುವಟಿಕೆಗಳಿಗೆ ಯುವಕರನ್ನು ಸೇರ್ಪಡೆ ಗೊಳಿಸಿಕೊಳ್ಳುವುದು, ಅವರಿಗೆ ವಿಧ್ವಂಸಕ ಚಟುವಟಿಕೆಗೆ ಬೇಕಾದ ಆರ್ಥಿಕ ಸಹಾಯ ಒದಗಿಸುವ ಕಾರ್ಯದಲ್ಲಿ ನಿರತನಾಗಿದ್ದ.
ಅಲ್ಲದೆ ಭಾರತದಲ್ಲಿ ನಡೆದ ಹಲವು ಪ್ರಮುಖ ದಾಳಿ ಮತ್ತು ವಿಧ್ವಂಸಕ ಕೃತ್ಯಗಳಲ್ಲಿಯೂ ಈ ಅಬ್ದುಲ್ ವಾಹಿದ್ ಸಿದ್ದಿಬಾಪನ ಕೈವಾಡದ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈತನ ಬಂಧನಕ್ಕಾಗಿ ಪೊಲೀಸರು ತೀವ್ರ ಹುಡುತಾಟದಲ್ಲಿದ್ದರು. ಅಲ್ಲದೆ ಈ ಹಿಂದೆ ಇಂಟರ್ ಪೋಲ್ ಪೊಲೀಸರು ರೆಡ್ ಕಾರ್ನರ್ ನೋಟಿಸ್ ಕೂಡ ಹೊರಡಿಸಿದ್ದರು. ವಿವಿಧ ದೇಶಗಳ ಪೊಲೀಸರು ಈತನ ಮೇಲೆ ಕಣ್ಣಿಟ್ಟಿದ್ದರಿಂದ ಈತನ ಬಂಧನ ಸುಲಭವಾಯಿತು ಎಂದು ಎನ್ ಐಎ ಮೂಲಗಳು ತಿಳಿಸಿವೆ.