ನವದೆಹಲಿ: ಫ್ಲ್ಯಾಟ್ ನೀಡುವುದಾಗಿ ಹೇಳಿ ವಂಚಿಸಿದ ಆರೋಪ ಎದುರಿಸುತ್ತಿರುವ ಯುನಿಟೆಕ್ ಲಿಮಿಟೆಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯ ಇತ್ಯರ್ಥ ಆಯೋಗ (ಎನ್ಸಿಡಿಆರ್ಸಿ) ಮಹತ್ವದ ಆದೇಶ ನೀಡಿದೆ.
ಹಣ ಹೂಡಿರುವ ಪ್ರತಿ ಗ್ರಾಹಕನಿಗೆ 60 ಲಕ್ಷ ರೂ. ಪಾವತಿಸಬೇಕು ಎಂದು ರಾಷ್ಟ್ರೀಯ ಗ್ರಾಹಕರ ವ್ಯಾಜ್ಯ ಇತ್ಯರ್ಥ ಆಯೋಗ ಆದೇಶ ನೀಡಿದೆ.
ಗುಡಗಾಂವ್ನಲ್ಲಿ 144ಕ್ಕೂ ಹೆಚ್ಚು ಮಂದಿಗೆ ಫ್ಲ್ಯಾಟ್ ನೀಡುವುದಾಗಿ ವಂಚಿಸಿದ ಹಿನ್ನೆಲೆಯಲ್ಲಿ ಹಣ ನೀಡಿ ವಂಚನೆಗೊಳಗಾದ ಗ್ರಾಹಕರಲ್ಲಿ ಒಬ್ಬರಾದ ಸಂಜಯ್ ಅರೋರಾ ಎಂಬವರು ಎನ್ಸಿಡಿಆರ್ಸಿ ಮುಂದೆ ನ್ಯಾಯಕ್ಕಾಗಿ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಆಯೋಗ ಈಗ ಈ ಮಹತ್ವದ ಆದೇಶ ನೀಡಿದೆ. ಅರೋರಾ ತಮ್ಮ ಅರ್ಜಿಯಲ್ಲಿ ಹೇಳಿರುವ ಪ್ರಕಾರ ಅವರು 2006ರಲ್ಲಿ 59.98 ಲಕ್ಷ ರೂ. ಪಾವತಿಸಿ ಗ್ರೇಟರ್ ನೋಯ್ಡಾದ ಸೆಕ್ಟರ್ ಪಿ2ನಲ್ಲಿ ಫ್ಲ್ಯಾಟ್ ಕರೀದಿಸಿದ್ದರು. ಆದರೆ ರಿಯಲ್ ಎಸ್ಟೇಟ್ ಕಂಪನಿ ಫ್ಲ್ಯಾಟ್ ನೀಡದೇ ಮೋಸ ಮಾಡಿದೆ. ಕಾರಣ ನಾವು ಪಾವತಿಸಿದ ಹಣ, ವಾರ್ಷಿಕ ಶೇಕಡಾ 18ರಷ್ಟು ಬಡ್ಡಿ ಹಾಗೂ ವ್ಯಾಜ್ಯಕ್ಕೆ ತಗಲಿದ ವೆಚ್ಚವನ್ನೂ ಸೇರಿಸಿ ಹಿಂದಿರುಗಿಸಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಎಂ.ಮಲೀಕ್ ಅವರನ್ನೊಳಗೊಂಡ ನ್ಯಾಯಪೀಠ, ಗ್ರಾಹಕರಿಗೆ ಮೋಸ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅರ್ಜಿದಾರನಿಗೆ 60 ಲಕ್ಷ ರೂ. ನೀಡಬೇಕೆಂದು ಆದೇಶಿಸಿದೆ.