ಚಂಡೇಲ್: ಮಣಿಪುರದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಚಂಡೇಲ್ ಜಿಲ್ಲೆಯಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ ಅಸ್ಸಾಂ ರೈಫಲ್ಸ್ನ 6 ಯೋಧರು ಹುತಾತ್ಮರಾಗಿದ್ದಾರೆ.
ಮಣಿಪುರದ ಚಂಡೇಲ್ ಜಿಲ್ಲೆಯಲ್ಲಿ ಉಂಟಾಗಿರುವ ಭೂಕುಸಿತ ಪ್ರದೇಶ ಪರಿಸ್ಥಿತಿಯನ್ನು ಪರಿಶೀಲಿಸಿ ವಾಪಸ್ಸಾಗುತ್ತಿದ್ದ 29ನೇ ಅಸ್ಸಾಂ ರೈಫಲ್ಸ್ ಯೋಧರ ಮೇಲೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಓರ್ವ ಸೇನಾಧಿಕಾರಿ ಸೇರಿದಂತೆ ಒಟ್ಟು ಆರು ಮಂದಿ ಯೋಧರು ಮೃತಪಟ್ಟಿದ್ದಾರೆ. ಸೈನಿಕರ ಹತ್ಯೆ ಬಳಿಕ ಉಗ್ರರು ಯೋಧರ ಬಳಿ ಇದ್ದ 4 ಎಕೆ.47 ರೈಫಲ್, ಇನ್ಸಾಸ್ ರೈಫಲ್ಗಳು ಮತ್ತು ಎಲ್ಎಂಜಿ ರೈಫಲ್ ಕಸಿದು ಪರಾರಿಯಾಗಿದ್ದರು.
ಈ ವೇಳೆ ಇತರೆ ಯೋಧರು ನಡೆಸಿದ ಮರುದಾಳಿಗೆ ಬೆದರಿದ ಉಗ್ರರು ಶಸ್ತ್ರಾಸ್ತ್ರ ಬಿಟ್ಟು ಪರಾರಿಯಾಗಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. ಗೃಹ ಸಚಿವ ರಾಜನಾಥ್ ಸಿಂಗ್ ಅಸ್ಸಾಂ ರೈಫಲ್ಸ್ನ ಡಿಜಿಯೊಂದಿಗೆ ಮಾತುಕತೆ ನಡೆಸಿದ್ದು, ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ.
"ಉಗ್ರರು ಯೋಧರನ್ನು ಹೊಡೆದುರುಳಿಸಿರುವುದು ದುಃಖದ ವಿಷಯ. ಯೋಧರು ಕುಟುಂಬದವರಿಗೆ ನೋವು ತಡೆದುಕೊಳ್ಳುವ ಶಕ್ತಿ ನೀಡಲಿ. ಅಸ್ಸಾಂ ರೈಫಲ್ಸ್ನ ಡಿಜಿಯೊಂದಿಗೆ ಮಾತನಾಡಿದ್ದು, ಗೃಹ ಸಚಿವಾಲಯ ಘಟನೆಯ ನಂತರದ ಬೆಳವಣಿಗೆಗಳ ಮೇಲೆ ನಿಗಾ ವಹಿಸಿದೆ" ಎಂದು ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.