ತೆಹ್ರಾನ್: ಇರಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಇರಾನ್ ಅಧ್ಯಕ್ಷ ಹಸನ್ ರೂಹಾನಿ ಅವರೊಂದಿಗೆ ಮಾತುಕತೆ ನಡೆಸಿದ್ದು 12 ಒಪ್ಪಂದಗಳಿಗೆ ಸಹಿಹಾಕಿದ್ದಾರೆ.
ಒಪ್ಪಂದಗಳಿಗೆ ಸಹಿಹಾಕಿದ ನಂತರ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ- ಇರಾನ್ ಮಿತ್ರ ರಾಷ್ಟ್ರಗಳಾಗಿದ್ದು, ದೀರ್ಘಕಾಲದ ಸಾಂಸ್ಕೃತಿಕ, ವಾಣಿಜ್ಯ, ಕಲೆ ಸಂಬಂಧಗಳನ್ನು ಹೊಂದಿದೆ. ಚಾಬಹಾರ್ ಬಂದರು ನಿರ್ಮಾಣ ಒಪ್ಪಂದ ಸೇರಿದಂತೆ ಒಟ್ಟು 12 ಮಹತ್ವದ ಒಪ್ಪಂದಗಳು ನಡೆದಿದ್ದು, ಇವು ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭ ಮಾಡಲಿವೆ, ಚಬಹಾರ್ ಬಂದರು ನಿರ್ಮಾಣಕ್ಕಾಗಿ 500 ಡಾಲರ್ ನಷ್ಟು ಹಣವನ್ನು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಒಪ್ಪಂದಗಳ ಬಗ್ಗೆ ಮಾತನಾಡಿರುವ ಇರಾನ್ ಅಧ್ಯಕ್ಷ ಹಸನ್ ರೂಹಾನಿ, ಭಾರತದೊಂದಿಗಿನ ಒಪ್ಪಂದಗಳಿಂದ ಉಭಯ ದೇಶಗಳ ಆರ್ಥಿಕ ಸಂಬಂಧ ಗಟ್ಟಿಗೊಳ್ಳಲಿದೆ ಎಂದು ಹೇಳಿದ್ದಾರೆ.
ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಪರಸ್ಪರ ಸಹಕಾರ, ಸಾಂಸ್ಕೃತಿಕ ವಿನಿಮಯ ಸಹಕಾರವನ್ನು ಉತ್ತೇಜಿಸುವುದು, ಬಂದರು ಅಭಿವೃದ್ಧಿ, ಚಬಹಾರ್ ಬಂದರು ನಿರ್ಮಾಣ ಒಪ್ಪಂದ ಸೇರಿದಂತೆ 12 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿರುವ ಪ್ರಧಾನಿ ಮೋದಿ ಇರಾನ್ ಗೆ 150 ಮಿಲೀಯನ್ ಡಾಲರ್ ಸಾಲ ಘೋಷಿಸಿದ್ದಾರೆ.