ದೇಶ

ಉಗ್ರರ ವಿಧ್ವಂಸಕ ಯೋಜನೆ ವಿಫಲ; ಅಡಗಿಸಿಟ್ಟಿದ್ದ ಐಇಡಿ ಬಾಂಬ್ ನಿಷ್ಕ್ರಿಯಗೊಳಿಸಿದ ಭದ್ರತಾಪಡೆ

Srinivasamurthy VN

ಶ್ರೀನಗರ: ಗಡಿಯಲ್ಲಿ ಐಇಡಿ ಬಾಂಬ್ ಸ್ಫೋಟಿಸಿ ಭಾರತೀಯ ಯೋಧರನ್ನು ಕೊಲ್ಲುವ ಉಗ್ರರ ಕುತಂತ್ರ ಯೋಜನೆಯನ್ನು ಗಡಿ ಭದ್ರತಾ ಪಡೆಯ ಯೋಧರು ವಿಫಲಗೊಳಿಸಿದ್ದು, ಗಡಿಯಲ್ಲಿ  ಅಳವಡಿಸಲಾಗಿದ್ದ 2 ಐಇಡಿ ಬಾಂಬ್ ಗಳನ್ನು ಸೋಮವಾರ ನಿಷ್ಕ್ರಿಯಗೊಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಉಗ್ರರು ಅಡಗಿಸಿಟ್ಟಿದ್ದ 2 ಐಇಡಿ ಬಾಂಬ್ ಗಳನ್ನು ಭಾರತೀಯ ಯೋಧರು ನಿಷ್ಕ್ರಿಯಗೊಳಿಸಿದ್ದಾರೆ.  ಘಟನಾ ಸ್ಥಳದಲ್ಲಿ ಸಾಮಾನ್ಯ ಪಹರೆ ನಡೆಸುತ್ತಿದ್ದ ಭಾರತೀಯ ಯೋಧರಿಗೆ ಭೂಮಿಯೊಳಗೆ ಹುದುಗಿಸಿಟ್ಟಿದ್ದ ಶಂಕಾಸ್ಪದ ವಸ್ತುವೊಂದು ಕಂಡಿತ್ತು. ಇದರ ಪರೀಕ್ಷೆ ನಡೆಸಿದಾಗ ಅದು ಪ್ರಬಲ  ಐಇಡಿ ಬಾಂಬ್ ಎಂದು ತಿಳಿಯುತ್ತಿದ್ದಂತೆಯೇ ನಿಯಂತ್ರಣ ಕೊಠಡಿಗೆ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಬಾಂಬ್ ನಿಷ್ಕ್ರಿಯದಳದ ಯೋಧರು ಎರಡೂ ಬಾಂಬ್  ಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ.

ಅಲ್ಲದೆ ಗಡಿಯಲ್ಲಿ ಮತ್ತಷ್ಟು ಬಾಂಬ್ ಗಳನ್ನು ಅಳವಡಿಸಿರುವ ಕುರಿತು ಶಂಕೆ ಇದ್ದು, ಘಟನಾ ಪ್ರದೇಶದ ಸುತ್ತಮುತ್ತ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಹಿಂದೆಯೂ ಸಾಕಷ್ಟು ಬಾರಿ ಉಗ್ರರು  ಇದೇ ಗಡಿ ಪ್ರದೇಶಗಳಲ್ಲಿ ಭೂಮಿಯೊಳಗೆ ಬಾಂಬ್ ಗಳನ್ನು ಅಡಗಿಸಿಟ್ಟಿದ್ದರು.

SCROLL FOR NEXT