ಮುಂಬೈ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೇರಿ 2 ವರ್ಷಗಳು ಕಳೆದಿದ್ದು, ಸರ್ಕಾರದ ವಿಫಲ ಯತ್ನ ಹಾಗೂ ಸೋಲುಗಳ ಕುರಿತು ಮೋದಿ ವಿರುದ್ಧ ಶಿವಸೇನೆ ಗುರುವಾರ ಕಿಡಿಕಾರಿದೆ.
ಈ ಕುರಿತಂತೆ ತನ್ನ ಮುಖಪುಟ ಸಾಮ್ನಾದಲ್ಲಿ ಬರೆದುಕೊಂಡಿರುವ ಶಿವಸೇನೆಯು, ಮೋದಿ ಸರ್ಕಾರ ಹಣದುಬ್ಬರನ್ನು ನಿಯಂತ್ರಣಕ್ಕೆ ತರುವಲ್ಲಿ, ಗಡಿ ನುಸುಳುವಿಕೆ ತಡೆಯುವಲ್ಲಿ ಹಾಗೂ ಜಾರಿಗೆ ತಂದ ಯೋಜನೆಗಳು ಜನರನ್ನು ತಲುಪಿಸುವಲ್ಲಿ ವಿಫಲವಾಗಿದೆ ಎಂದು ಹೇಳಿಕೊಂಡಿದೆ.
ಇದಲ್ಲದೆ ಮೋದಿಯವರ ವಿದೇಶಾಂಗ ಪ್ರವಾಸದ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನೆಯು, ಮೋದಿಯವರ ನಿವಾಸ ದೇಶದಲ್ಲಿದೆಯೋ ಅಥವಾ ವಿದೇಶದಲ್ಲಿಯೋ ಎಂಬುದನ್ನು ಮೊದಲು ನಿರ್ಧರಿಸಬೇಕಿದೆ.
ಕಳೆದೆರಡು ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಯಾವುದೇ ಭ್ರಷ್ಟಚಾರಗಳು ನಡೆದಿಲ್ಲ. ಆದರೆ, ಸರ್ಕಾರ ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವಲ್ಲಿ ವಿಫಲವಾಗಿದೆ.
ಮೋದಿ ಸರ್ಕಾರ ಒಂದರ ಹಿಂದೆಯಂತೆ ಒಂದು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ, ಜನರಿಗೆ ಈ ಯೋಜನಗಳ ಅರಿವೇ ಇಲ್ಲ. ಪ್ರಸ್ತುತ ಇರುವ ಯೋಜನೆಗಳೇ ಈ ಹಿಂದಿದ್ದ ಸರ್ಕಾರದಲ್ಲಿಯೂ ಇತ್ತು. ಆದರೆ, ಹೆಸರು ಮಾತ್ರ ಬೇರೆಯಾಗಿತ್ತು. ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದಿದೆ.
ಅಲ್ಲದೆ, ಇದೇ ವೇಳೆ ವಿದೇಶದಲ್ಲಿರುವ ಕಪ್ಪುಹಣವನ್ನು ಹಿಂತಿರುಗಿ ತರುವುದರ ಕುರಿತಂತೆ ವ್ಯಂಗ್ಯವಾಡಿರುವ ಸೇನೆಯು ಎನ್ ಡಿಎ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಮೊದಲು ನೀಡಿದ್ದ ದೊಡ್ಡ ಭರವಸೆಯೇ ಕಪ್ಪುಹಣ ಹಿಂತಿರುಗಿ ತಂದು ಭಾರತದಲ್ಲಿರುವ ಪ್ರತೀಯೊಬ್ಬರ ಹೆಸರಿನಲ್ಲಿಯೂ ಒಂದೊಂದು ಲಕ್ಷ ಹಣವನ್ನು ಖಾತೆಗೆ ಹಾಕುವುದಾಗಿ ಹೇಳಿತ್ತು, ಆದರೆ, ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಈ ಭರವಸೆಯನ್ನು ಅವರು ಈಡೇರಿಸಿಲ್ಲ.
ಪಾಕಿಸ್ತಾನದವರು ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಕೆಗಳನ್ನು ಮುಂದುವರೆಸಿದ್ದು, ಈ ಸಮಸ್ಯೆ ಈವರೆಗೂ ಬಗೆಹರಿದಿಲ್ಲ. ನಮ್ಮ ಯೋಧರು ನಕ್ಸಲರು ಹಾಗೂ ಉಗ್ರರಿಂದ ಸಾವನ್ನಪ್ಪುತ್ತಿದ್ದಾರೆ. ಆದರೂ, ನೆರೆರಾಷ್ಟ್ರದವರೊಂದಿಗೆ ನಮ್ಮವರು ಮಾತುಕತೆ ನಡೆಸುತ್ತಲೇ ಇದ್ದಾರೆ ಎಂದು ಹೇಳಿಕೊಂಡಿದೆ.
ಇದರಂತೆ ಇತ್ತೀಚೆಗಷ್ಟೇ ನಡೆದ ಚುನಾವಣೆ ಫಲಿತಾಂಶ ಕುರಿತಂತೆ ವ್ಯಂಗ್ಯವಾಡಿರುವ ಸೇನೆಯು ಮೋದಿ ಸರ್ಕಾರದ ಮೇಲೆ ಕೆಲಸಗಳ ಹೊರೆ ಹೆಚ್ಚಾಗಿದ್ದು, ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ಜನತೆ ತಮ್ಮ ಸ್ವತಂತ್ರ ದಾರಿಯನ್ನು ಅವರು ಪರೀಕ್ಷಿಸಿಕೊಂಡಿದೆ ಎಂದು ಹೇಳಿದೆ.