ದೇಶ

ಗಾಜಿಯಾಬಾದ್ ಪೊಲೀಸರ ಪ್ರಕಾರ ರಾಹುಲ್ ಗಾಂಧಿ ಒಬ್ಬ ಡ್ರೈವರ್!

Srinivasamurthy VN

ಗಾಜಿಯಾಬಾದ್‌: ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಓರ್ವ ಡ್ರೈವರ್ ಅಂತೆ.. ಈ ಹಿಂದೆ ಗಾಜಿಯಾಬಾದ್ ನಲ್ಲಿ ಕಾರು ಚಾಲಕರಾಗಿದ್ದ ಅವರು ಇದೀಗ ದೆಹಲಿಯಲ್ಲಿ ರಾಜಕಾರಣ ಮಾಡುತ್ತಿದ್ದಾರಂತೆ.. ಅರೆ ಇದು ನಾವು ಹೇಳುತ್ತಿರುವ ಮಾತಲ್ಲ. ಬದಲಿಗೆ ಉತ್ತರ ಪ್ರದೇಶದ ಘಾಜಿಯಾಬಾದ್ ಜಿಲ್ಲೆಯ ಪೊಲೀಸರ ಹೇಳಿಕೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನ ವಿಳಾಸ ಪತ್ತೆಗಾಗಿ ಹೋಗಿದ್ದ ಪೊಲೀಸರು ಅಲ್ವಿನ ಪಕ್ಕದ ಮನೆಯಾತ ನೀಡಿದ ಮಾಹಿತಿಯಾಧಾರದ ಮೇಲೆ ರಾಹುಲ್ ಗಾಂಧಿ ಅವರನ್ನು ಚಾಲಕರು ಎಂದು ಪ್ರಮಾಣಿಕೆ ನೀಡಿದ್ದಾರೆ. ಗಾಜಿಯಾಬಾದ್ ಪೊಲೀಸರ ಈ ಪ್ರಮಾದಿಂದಾಗಿ ಇದೀಗ ಉತ್ತರ ಪ್ರದೇಶ ಪೊಲೀಸರು ಸಾರ್ವಜನಿಕ ವಲಯದಲ್ಲಿ ತೀವ್ರ ಮುದುಗರಕ್ಕೀಡಾಗಿದ್ದು, ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಿದ್ದಾರೆ.

ಆಗಿದ್ದೇನು: ಪ್ರಕರಣವೊಂದರ ಸಂಬಂಧ ಆರೋಪಿ ವ್ಯಕ್ತಿಯ ವಿಳಾಸ ಪಡೆಯಲು ತೆರಳಿದ್ದ ಶಿಪ್ರಾ ಸನ್‌ ಸಿಟಿಯ ಪೊಲೀಸ್‌ ಠಾಣೆಯ ಸಿಬಂಧಿಗಳು, ಸ್ಥಳೀಯರಿಂದ ಮಾಹಿತಿ ಕಲೆಹಾಕಿದ್ದಾರೆ. ಹೀಗೆ ಕಲೆಹಾಕಿದ ಮಾಹಿತಿಯನ್ವಯ ಎಫ್ ಐಆರ್ ದಾಖಲಿಸಿದ ಪೊಲೀಸರು ಎಫ್ ಐಆರ್ ನಲ್ಲಿ ಬಾಡಿಗೆದಾರನೊಬ್ಬನ ವೈಯಕ್ತಿಕ ವಿವರಗಳ ಪರಿಶೀಲನೆ ನಡೆಸಿದಾಗ, ಈ ವ್ಯಕ್ತಿ (ರಾಹುಲ್ ಗಾಂಧಿ)ಯು ಈ ಹಿಂದೆ ದೆಹಲಿಯಲ್ಲಿ ಮನೆ ನಂಬರ್ 12, ತುಘಲಕ್‌ ಲೇನ್‌ ವಿಳಾಸದಲ್ಲಿ ವಾಸವಾಗಿದ್ದ. ಈತನ ಹೆಸರು ರಾಹುಲ್ ಗಾಂಧಿ ಎಂದು ತಿಳಿದುಬಂದಿದ್ದು, ಈತ ದಿವಂಗತ ರಾಜಿವ್ ಗಾಂಧಿಯವರ ಮಗ  ಎಂದು ದಾಖಲಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ವೃತ್ತಿಯಲ್ಲಿ ರಾಜಕಾರಣಿಯಾಗಿದ್ದು, ಅವಿವಾಹಿತ ಎಂಬುದಾಗಿ ಪೊಲೀಸರು ದೃಢೀಕರಿಸಿದ್ದಾರೆ.

ಈ ವಿಚಾರ ಸ್ಥಳೀಯರಿಂದ ಕಾಡ್ಗಿಚ್ಚಿನಂತೆ ಹರಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ಮೂರ್ಖತನಕ್ಕೆ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ಇನ್ನು ಈ ಪ್ರಕರಣದ ಬಗ್ಗೆ ಮಾತನಾಡಿರುವ ಶಿಪ್ರಾ ಸನ್ ಸಿಟಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಗೋರಕ್ ನಾಥ್ ಯಾದವ್ ಅವರು, ಪ್ರಕರಣದಲ್ಲಿ ಯಾರೋ ಕಿಡಿಗೇಡಿಗಳು ಪೊಲೀಸರನ್ನು ಖಂಡಿತಾ ಮೂರ್ಖರನ್ನಾಗಿಸಿದ್ದಾರೆ. ಹೀಗಾಗಿ ಆ ದುಷ್ಕರ್ಮಿಗಳು ಯಾರು ಪತ್ತೆ ಹಚ್ಚಲಾಗುತ್ತದೆ ಎಂದು ಹೇಳಿದ್ದಾರೆ.

ಒಟ್ಟಾರೆ ಯಾರೋ ಹೇಳಿದ ಮಾತನ್ನು ಕೇಳಿ ಎಫ್ ಐಆರ್ ದಾಖಲಿಸಿರುವ ಉತ್ತರ ಪ್ರದೇಶದ ಪೊಲೀಸರ ಸಾಮಾನ್ಯ ಜ್ಞಾನ ಎಷ್ಚಿದೆ ಎಂಬುದು ಈ ಪ್ರಕರಣದಿಂದ ತಿಳಿಯುತ್ತದೆ.

SCROLL FOR NEXT