ದೇಶ

ಸಚಿನ್-ಲತಾ ವಿಡಿಯೋ: ಟ್ವಿಟ್ಟರ್, ಸ್ನ್ಯಾಪ್ ಚಾಟ್ ನಲ್ಲಿ ತಿರುಗೇಟು ನೀಡಿದ ತನ್ಮಯ್ ಭಟ್

Sumana Upadhyaya

ಮುಂಬೈ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಗಾನ ಕೋಗಿಲೆ ಲತಾ ಮಂಗೇಶ್ಕರ್  ಅವರನ್ನು ಅಪಹಾಸ್ಯ ಮಾಡುವ ರೀತಿಯ ವಿವಾದಿತ ಸ್ನ್ಯಾಪ್ ಚಾಟ್ ವಿಡಿಯೋ ಚಿತ್ರೀಕರಿಸಿದ್ದಕ್ಕೆ ಎಷ್ಟು ಆಕ್ರೋಶಭರಿತವಾಗಿ ಜನರು ಪ್ರತಿಕ್ರಿಯಿಸುತ್ತಿದ್ದಾರೋ ಅಷ್ಟೇ ತೀಕ್ಷ್ಣವಾಗಿ ತನ್ಮಯ್ ಭಟ್ ಸರಣಿ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಗಳಲ್ಲಿ ಸುದ್ದಿಯಾಗಿರುವ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗೆ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸದೆ ತಿರುಗೇಟು ನೀಡಿದ್ದಾರೆ.

ಒಂದು ಟ್ವೀಟ್ ನಲ್ಲಿ ಬರೆದುಕೊಂಡಿರುವ ಅವರು, ಆಪ್ ನಲ್ಲಿ ತಮ್ಮ ಪ್ರೊಫೈಲ್ ಗೆ ತುಂಬಾ ಜನರು ಹುಡುಕುತ್ತಿರುವುದರಿಂದ ಟ್ರಾಫಿಕ್ ಉಂಟಾಗಿದೆ. ಹಾಗಾಗಿ ಸ್ನ್ಯಾಪ್ ಚಾಟ್ ತಮಗೆ ಹಣ ನೀಡಬೇಕೆಂದು ಹೇಳಿದ್ದಾರೆ.

ಪರಿಸ್ಥಿತಿಯು ಅತ್ಯಂತ ದುರಂತವಾಗಿದೆ. ದೇಶದಲ್ಲಿ ಮುಖ್ಯ ಸುದ್ದಿಯಾಗುವ ಎಷ್ಟೊಂದು ಸುದ್ದಿಗಳು ಇರುವಾಗ ತಮ್ಮ ಸ್ನ್ಯಾಪ್ ಚಾಟ್ ವಿಡಿಯೋ ರಾಷ್ಟ್ರೀಯ ಸುದ್ದಿಯಾಗಿರುವುದು ನಿಜಕ್ಕೂ ದುರಂತ ಎಂದು ತನ್ಮಯ್ ಭಟ್ ಹೇಳಿದ್ದಾರೆ. ಕೆಲವು ಟ್ವೀಟ್ ಗಳಿಗೆ ಅವರು ಹೊಡೆಯುವ ರೀತಿಯಲ್ಲಿಯೇ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅಲ್ಲದೆ ಸ್ನ್ಯಾಪ್ ಚಾಟ್ ನಲ್ಲಿ 3 ವಿಡಿಯೋಗಳನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಹೇಳಿಕೆ ಬಿಡುಗಡೆ ಮಾಡಿ ತಮ್ಮ ನಿಲುವನ್ನು ಸಮರ್ಥಿಸಲು ಪ್ರಯತ್ನಿಸಿದ್ದಾರೆ. ತಮಗೆ ಬೆಂಬಲ ನೀಡಬೇಕೆಂದು ಜನತೆಯನ್ನು ಕೋರಿದ್ದಾರೆ.

ನೀವು ಸಚಿನ್ ವರ್ಸಸ್ ಲತಾ ವಿಡಿಯೋವನ್ನು ಇಷ್ಟಪಟ್ಟಿದ್ದರೆ, ವಿಡಿಯೋದ ಯಾವ ಭಾಗವನ್ನು ಮತ್ತು ಏಕೆ ಇಷ್ಟಪಟ್ಟಿದ್ದೀರಿ ಎಂದು ತಿಳಿಸಿ ಎಂದು ಜನರಲ್ಲಿ ತನ್ಮಯ್ ಮನವಿ ಮಾಡಿದ್ದಾರೆ.

SCROLL FOR NEXT