ಲಖನೌ: ಉತ್ತರ ಪ್ರದೇಶದ ದಾದ್ರಿ ಹತ್ಯೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಹತ್ಯೆಗೀಡಾದ ಮೊಹಮ್ಮದ್ ಇಕ್ಲಾಖ್ ಮನೆಯ ರಿಫ್ರಿಜರೇಟರ್ ನಲ್ಲಿ ಸಿಕ್ಕಿದ್ದು ಕುರಿ ಮಾಂಸ ಅಲ್ಲ, ಗೋಮಾಂಸ ಎಂದು ಮಥುರಾದ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಖಚಿತಪಡಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ದಾದ್ರಿಯ ಇಕ್ಲಾಖ್ ಮನೆಯಿಂದ ಸಂಗ್ರಹಿಸಿದ್ದ ಮಾಂಸದ ಚೂರುಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದು ದನ ಅಥವಾ ಕರುವಿನ ಮಾಂಸ ಎಂದು ವಿಧಿವಿಜ್ಞಾನ ಪ್ರಯೋಗಾಲಯ ಸ್ಪಷ್ಟಪಡಿಸಿದೆ ಎಂದು ತಿಳಿಸಿದೆ.
ಈ ಪ್ರಯೋಗಾಲಯದ ವರದಿ ಉತ್ತರಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷಕ್ಕೆ ದೊಡ್ಡ ಹೊಡೆತವಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಿದೆ. ಯಾಕೆಂದರೆ ಈ ಮೊದಲು ಇಕ್ಲಾಖ್ ಮನೆಯ ರಿಫ್ರಿಜರೇಟರ್ ನಲ್ಲಿ ಸಿಕ್ಕಿರುವುದು ಮಟನ್ ಮಾಂಸ, ಬೀಫ್ ಅಲ್ಲ ಎಂದು ಸರ್ಕಾರಿ (ವಿಧಿವಿಜ್ಞಾನ ಪ್ರಯೋಗಾಲಯ) ಮುಖ್ಯ ವೆಟರ್ನರಿ ಆಫೀಸರ್ ವರದಿ ನೀಡಿದ್ದರು.
ಇಕ್ಲಾಖ್ ಹತ್ಯೆ ದೇಶದಲ್ಲಿ ರಾಜಕೀಯವಾಗಿವಾಗಿ ಬಿಸಿ, ಬಿಸಿ ಚರ್ಚೆ, ಆರೋಪಕ್ಕೆ ಕಾರಣವಾಗಿತ್ತು. ಇಕ್ಲಾಕ್ ಪ್ರಕರಣದಲ್ಲಿ ಕೈಗೊಂಡಿರುವ ಕ್ರಮದ ಬಗ್ಗೆ ತೃಪ್ತಿ ಇರುವುದಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಿಳಿಸಿದ್ದರು. ಅಲ್ಲದೇ ಇಕ್ಲಾಖ್ ಕುಟುಂಬಕ್ಕೆ ಅಖಿಲೇಶ್ ಸರ್ಕಾರ 45 ಲಕ್ಷ ರುಪಾಯಿ ಭಾರೀ ಮೊತ್ತದ ಪರಿಹಾರ ಘೋಷಿಸಿತ್ತು.
ಸೆಪ್ಟೆಂಬರ್ 28ರಂದು ದಾದ್ರಿಯ ಬಿಶಾಡಾ ಗ್ರಾಮದಲ್ಲಿ ಗೋಮಾಂಸ ಸಂಗ್ರಹಿಸಿದ ಆರೋಪದ ಮೇಲೆ ಮೊಹಮ್ಮದ್ ಇಕ್ಲಾಖ್ ಅವರನ್ನು ಮನೆಯಿಂದ ಕರೆತಂದು ಚಚ್ಚಿ ಸಾಯಿಸಲಾಗಿತ್ತು. ಅಲ್ಲದೆ ಇಖಲಾಕ್ ಅವರ ಪುತ್ರ ದನಿಶ್ ಮೇಲೂ ಹಲ್ಲೆ ನಡೆಸಲಾಗಿತ್ತು.