ನೈನಿತಾಲ್: ವಿವಾದಿತ ಕುಟುಕು ಕಾರ್ಯಾಚರಣೆ ಕುರಿತ ವಿಡಿಯೋ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಾಖಂಡ್ ಹೈಕೋರ್ಟ್ ಮುಖ್ಯಮಂತ್ರಿ ಹರೀಶ್ ರಾವತ್ ಅವರ ಬಂಧನಕ್ಕೆ ಮಂಗಳವಾರ ತಡೆಯಾಜ್ಞೆ ನೀಡಿದೆ.
ಕುಟುಕು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕಳೆದ ವಾರ ಸಿಬಿಐ ಹರೀಶ್ ರಾವತ್ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.
ತಮ್ಮ ವಿರುದ್ಧದ ಸಿಬಿಐ ತನಿಖೆಗೆ ಹಾಗೂ ಬಂಧನಕ್ಕೆ ತಡೆ ಕೋರಿ ರಾವತ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಸಿಎಂ ಬಂಧನಕ್ಕೆ ತಡೆ ನೀಡಿದೆ. ಆದರೆ ಸಿಬಿಐ ತನಿಖೆಗೆ ತಡೆ ನೀಡಲು ನಿರಾಕರಿಸಿದೆ.
ಖಾಸಗಿ ಸುದ್ದಿವಾಹಿನಿಯ ಮುಖ್ಯ ಸಂಪಾದಕರು ನಡೆಸಿದ್ದ ಈ ಕುಟುಕು ಕಾರ್ಯಾಚರಣೆಯ ಸಿಡಿಯನ್ನು, 9 ಮಂದಿ ಬಂಡಾಯ ಕಾಂಗ್ರೆಸ್ ಶಾಸಕರು ವಿಧಾನಸಭೆಯಲ್ಲಿ ಪ್ರದರ್ಶಿಸಿದ್ದರು. ಅಲ್ಲದೆ ಹರೀಶ್ ರಾವತ್ ಅವರು ಬಂಡಾಯ ಶಾಸಕರ ಬೆಂಬಲ ಗಳಿಸಲು ಪತ್ರಕರ್ತನ ಜೊತೆಗೆ ಹಣಕಾಸು ವ್ಯವಹಾರ ನಡೆಸಿದ್ದನ್ನು ಸಿಡಿಯಲ್ಲಿ ತೋರಿಸಲಾಗಿತ್ತು. ಆದರೆ ಬಂಡಾಯ ಶಾಸಕರು ಬಹಿರಂಗಪಡಿಸಿದ ಕುಟುಕು ಕಾರ್ಯಾಚರಣೆಯ ವಿಡಿಯೋ ನಕಲಿ ಮತ್ತು ರಾಜಕೀಯ ಪಿತೂರಿ ಎಂದು ರಾವತ್ ಹೇಳಿದ್ದರು. ಬಳಿಕ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು.