ಭೋಪಾಲ್: ಮಧ್ಯ ಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ ನಡೆದ ಎನ್ ಕೌಂಟರ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ನಕಲಿ ಎನ್ ಕೌಂಟರ್ ಎಂಬ ಆರೋಪದ ನಡುವೆಯೇ ಸಿಮಿ ಉಗ್ರರ ಮೃತ ದೇಹದ ಮರಣೋತ್ತರ ಪರೀಕ್ಷಾ ವರದಿ ಬಹಿರಂಗವಾಗಿದೆ.
ವೈದ್ಯರು ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಉಗ್ರರ ಕೆಳಭಾಗದ ಹೊಟ್ಟೆಗೆ ಬಿದ್ದ ಗುಂಡೇಟಿನಿಂದ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ. ಭೋಪಾಲ್ ನ ಹೊರವಲಯದ ಈಟ್ ಖೇಡಿ ಗ್ರಾಮದ ಬಳಿ ನಡೆದ ಉಗ್ರರ ಎನ್ ಕೌಂಟರ್ ಪ್ರಕರಣ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಅತ್ತ ಪ್ರತಿಪಕ್ಷಗಳು ನಕಲಿ ಎನ್ ಕೌಂಟರ್ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ. ಅಂತೆಯೇ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತಿವೆ.
ಪ್ರಮುಖವಾಗಿ ಸಿಪಿಐ-ಎಂ, ಆಪ್, ಕಾಂಗ್ರೆಸ್ ಪಕ್ಷಗಳು ಮುಖಂಡ ಮಧ್ಯ ಪ್ರದೇಶ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದು, ಕೂಡಲೇ ಪ್ರಕರಣದ ಸಂಪೂರ್ಣ ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತಿವೆ. ಆದರೆ ಪ್ರತಿಪಕ್ಷಗಳ ಆರೋಪಕ್ಕೆ ಸೊಪ್ಪು ಹಾಕದ ಮಧ್ಯ ಪ್ರದೇಶ ಸರ್ಕಾರ ಪೊಲೀಸರ ಬೆನ್ನಿಗೆ ನಿಂತಿದೆ, ಪೊಲೀಸರು ಮಾಡಿದ ಕಾರ್ಯಕ್ಕೆ ಅವರನ್ನು ಶ್ಲಾಘಿಸುವುದನ್ನು ಬಿಟ್ಟು, ಅವರ ವಿರುದ್ಧ ಇಲ್ಲ-ಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಕಿಡಿಕಾರಿದೆ.
ಇನ್ನು ಮೃತ ಸಿಮಿ ಉಗ್ರರ ಪೋಷಕರು ಕೂಡ ತಮ್ಮ ಮಗ ನಿರಪರಾಧಿಯಾಗಿದ್ದು, ಸರ್ಕಾರವೇ ಅವರನ್ನು ಬಲಿಪಶುಗಳನ್ನಾಗಿ ಮಾಡಿದೆ ಎಂದು ಆರೋಪಿಸಿದ್ದಾರೆ.