ಜಬಲ್ಪುರ: ಭೋಪಾಲ್ ಕೇಂದ್ರೀಯ ಕಾರಾಗೃಹದಿಂದ ತಪ್ಪಿಸಿಕೊಂಡಿದ್ದ ಸಿಮಿ ಉಗ್ರರನ್ನು ಎನ್'ಕೌಂಟರ್ ಮಾಡಿ ಹತ್ಯೆ ಮಾಡಿದ ಪ್ರಕರಣ ಕುರಿತಂತೆ 2 ವಾರಗಳೊಳಗಾಗಿ ವರದಿ ಸಲ್ಲಿಸುವಂತೆ ಉಗ್ರ ನಿಗ್ರಹ ತಂಡಕ್ಕೆ ಮಧ್ಯಪ್ರದೇಶ ಹೈಕೋರ್ಟ್ ಗುರುವಾರ ಸೂಚನೆ ನೀಡಿದೆ.
ಬಂಧನಕ್ಕೊಳಗಾಗಿದ್ದ 8 ಸಿಮಿ ಉಗ್ರರು ನ್ಯಾಯಾಲಯದಲ್ಲಿ ಜಾಮೀನು ನೀಡುವಂತೆ ಕೋರಿ ಅರ್ಜಿಗಳನ್ನು ಸಲ್ಲಿಸಿದ್ದರು. ಇದರಲ್ಲಿ ಕೆಲವರಿಗೆ ಜಾಮೀನು ದೊರೆತಿತ್ತು. ಈ ಬೆಳವಣಿಗೆಗಳ ಮಧ್ಯೆಯೇ ಆರೋಪಿಗಳನ್ನು ಎನ್ ಕೌಂಟರ್ ಮೂಲಕ ಹತ್ಯೆ ಮಾಡಲಾಗಿತ್ತು.
ಎನ್ ಕೌಂಟರ್ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ. ಕೆಲವರ ಜಾಮೀನು ಅರ್ಜಿ ವಿಚಾರಣೆ ಇನ್ನೂ ಬಾಕಿ ಉಳಿದಿತ್ತು. ಹೀಗಾಗಿ ಎನ್ ಕೌಂಟರ್ ಕುರಿತಂತೆ ವಿವರಣಾತ್ಮಕ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ ಎಂದು ನ್ಯಾಯಾಲಯದ ಬಳಿ ಮನವಿ ಮಾಡಿಕೊಳ್ಳಲಾಗಿತ್ತು ಎಂದು ಪರ ವಕೀಲ ನಯೀಮ್ ಖಾನ್ ಅವರು ಹೇಳಿದ್ದಾರೆ.
ಇದರಂತೆ ಇಂದು ವಿಚಾರಣೆ ನಡೆಸಿರುವ ಮಧ್ಯಪ್ರದೇಶ ನ್ಯಾಯಾಲಯವು ಉಗ್ರ ನಿಗ್ರಹ ದಳದ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, 2 ವಾರಗಳೊಳಗಾಗಿ ಎನ್ ಕೌಂಟರ್ ಕುರಿತಂತೆ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ಹೇಳಿದೆ ಎಂದು ತಿಳಿದುಬಂದಿದೆ.