ದೇಶ

ಮೋದಿಯವರ ಶಿಷ್ಯನಂತೆ ನಟಿಸುತ್ತಿದ್ದಾರೆ ವಿ.ಕೆ.ಸಿಂಗ್: ಕಾಂಗ್ರೆಸ್ ವಕ್ತಾರ

Manjula VN

ಭಿವಾನಿ: ಸೇನೆಯ ನಿವೃತ್ತ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಶಿಷ್ಯನಂತೆ ನಟಿಸುತ್ತಿದ್ದಾರೆಂದು ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ ಅವರು ಗುರುವಾರ ಹೇಳಿದ್ದಾರೆ.

ಮಾಜಿ ಯೋಧ ರಾಮ್ ಕಿಶನ್ ಗ್ರೆವಾಲ್ ಆತ್ಮಹತ್ಯೆ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಮಾನ ವೇತನ ಮತ್ತು ಸಮಾನ ಪಿಂಚಣಿ ಕುರಿತಂತೆ ದೇಶದ ಜನತೆಗೆ ಸುಳ್ಳನ್ನೇ ಹೇಳುತ್ತಾ ಬಂದಿದ್ದಾರೆ. ಆತ್ಯಹತ್ಯೆಗೆ ಶರಣಾದ ಮಾಜಿ ಯೋಧನ ಮಾನಸಿಕ ಸ್ಥಿತಿ ಕುರಿತಂತೆ ಮಾತನಾಡಿದಕ್ಕಾಗಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಭಾರತೀಯ ಸೇನೆ ಹಾಗೂ ರಾಮ್ ಕಿಶನ್ ಅವರ ಕುಟುಂಬಸ್ಥರ ಬಳಿ ಕ್ಷಮೆಯಾಚಿಸಬೇಕಿದೆ ಎಂದು ಹೇಳಿದ್ದಾರೆ.

ಸುಳ್ಳು ಹೇಳುವುದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜೀವನದ ಭಾಗವಾಗಿ ಹೋಗಿದೆ. ಸಮಾನ ವೇತನ ಮತ್ತು ಸಮಾನ ಪಿಂಚಣಿ ಜಾರಿಯಾಗಿದ್ದೇ ಆಗಿದ್ದರೆ, ರಾಮ್ ಕಿಶನ್ ಗ್ರೆವಾಲ್ ಅವರು ಆತ್ಮಹತ್ಯೆಯನ್ನೇಕೆ ಮಾಡಿಕೊಳ್ಳುತ್ತಿದ್ದರು?...ಒಆರ್'ಒಪಿ ಜಾರಿಯಾಗಿದ್ದೇ ಆಗಿದ್ದರೆ, ಜಂತರ್ ಮಂತರ್ ನಲ್ಲಿ ಕಳೆದ 607 ದಿನಗಳಿಂದಲೂ ನಮ್ಮ ಯೋಧರೇಕೆ ಪ್ರತಿಭಟನೆ ನಡೆಸುತ್ತಿದ್ದಾರೆ? ಒಆರ್'ಒಪಿ ಜಾರಿಯಾಗಿದ್ದರೆ ನಮ್ಮ ಯೋಧರೇಕೆ ನ್ಯಾಯಾಕ್ಕಾಗಿ ಕಣ್ಣೀರಿಡುತ್ತಿದ್ದಾರೆ?...ಈ ಎಲ್ಲಾ ಬೆಳವಣಿಗೆಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸುಳ್ಳು ಹೇಳುತ್ತಿದ್ದಾರೆಂಬುದನ್ನು ತೋರಿಸುತ್ತದೆ ಎಂದಿದ್ದಾರೆ.

ವಿ.ಕೆ. ಸಿಂಗ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಶಿಷ್ಯನಂತೆ ನಟಿಸುತ್ತಿದ್ದು, ಮಾಜಿ ಯೋಧ ರಾಮ್ ಕಿಶನ್ ಅವರ ಮಾನಸಿಕ ಸ್ಥಿತಿ ಕುರಿತಂತೆ ಪ್ರಶ್ನೆ ಎತ್ತುವ ಮೂಲಕ ಮೋದಿಯವರು ಈ ಹಿಂದೆ ಸೇನೆಗೆ ಅಗೌರವ ಸೂಚಿಸಿದಂತೆಯೇ ವಿಕೆ. ಸಿಂಗ್ ಅವರೂ ಸೇನೆಗೆ ಅಗೌರವವನ್ನು ಸೂಚಿಸಿದ್ದಾರೆಂದು ತಿಳಿಸಿದ್ದಾರೆ.

SCROLL FOR NEXT