ಶ್ರೀನಗರ: ಒನ್ ರ್ಯಾಂಕ್ ಒನ್ ಪೆನ್ಶನ್ ಸಂಬಂಧ ಮಾಜಿ ಸೈನಿಕರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಇನ್ನೂ ಸುಮಾರು 1 ಲಕ್ಷ ಮಾಜಿ ಸೈನಿಕರು ಒಆರ್ ಒಪಿಯ ಸಂಪೂರ್ಣ ಲಾಭ ಪಡೆಯಲಿದ್ದಾರೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಗುರುವಾರ ಹೇಳಿದ್ದಾರೆ.
ಒಆರ್ ಒಪಿಗಾಗಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವರು, ಕೆಲವು ತಾಂತ್ರಿಕ ಕಾರಣಗಳಿಂದಾಗಿ ಒಆರ್ ಒಪಿಯನ್ನು ಸಂಪೂರ್ಣವಾಗಿ ಜಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಆದಾಗ್ಯೂ ಶೀಘ್ರದಲ್ಲೇ ಸಮಸ್ಯೆ ಪರಿಹಾರ ಮಾಡುವುದಾಗಿ ತಿಳಿಸಿದ್ದಾರೆ.
ಒಆರ್ ಒಪಿ ಜಾರಿಗೊಳಿಸುವುದಾಗಿ ಚುನಾವಣೆ ವೇಳೆ ನೀಡಿದ್ದ ಭರವಸೆಯನ್ನು ಈಡೇರಿಸಲು ಹಾಗೂ ಮಾಜಿ ಸೈನಿಕರ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಮನೋಹರ್ ಪರಿಕ್ಕರ್ ಅವರು ಹೇಳಿದ್ದಾರೆ.
ಭಾನುವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಒಆರ್ ಒಪಿ ಯೋಜನೆ ಜಾರಿಗಾಗಿ ಮೊದಲ ಕಂತಿನಲ್ಲಿ 5,500 ಕೋಟಿ ರುಪಾಯಿ ಬಿಡುಗಡೆ ಮಾಡಿರುವುದಾಗಿ ಹೇಳಿದ್ದರು. ಅಲ್ಲದೆ ಒಆರ್ ಒಪಿ ಯೋಜನೆ 200 ಅಥವಾ 500 ಕೋಟಿ ಯೋಜನೆ ಅಲ್ಲ. ಬರೋಬ್ಬರಿ 10,000 ಕೋಟಿ ರು.ಯೋಜನೆ ಅದು. ನಾನು ಪ್ರಧಾನಿಯಾದ ನಂತರ ಅದನ್ನು ಜಾರಿಗೊಳಿಸಲು ನಿರ್ಧರಿಸಿದೆ ಎಂದಿದ್ದರು.