ನವದೆಹಲಿ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಭಾರತ- ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವುದು ಒಂದೆಡೆಯಾದರೆ, ಮತ್ತೊಂದು ಬದಿಯ ಗಡಿಯಲ್ಲಿ ಚೀನಾ ಸಮಸ್ಯೆ ಸೃಷ್ಟಿಸಿದೆ.
ಲಡಾಕ್ ನಲ್ಲಿ ಭಾರತ ನಡೆಸುತ್ತಿರುವ ಕಾಲುವೆ ನಿರ್ಮಾಣ ಕಾಮಗಾರಿಯನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ( ಪಿಎಲ್ ಎ) ತಡೆದಿದೆ ಎಂಬ ವರದಿ ಪ್ರಕಟವಾಗಿದೆ. ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಲಡಾಕ್ ನ ಡೆಮ್ ಚೋಕ್ ನ ಪ್ರದೇಶದ ಗ್ರಾಮಕ್ಕೆ ಕಾಲುವೆ ನೀರನ್ನು ಹರಿಸಲು ಭಾರತ ಸರ್ಕಾರ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಾಲುವೆ ನಿರ್ಮಾಣ ಮಾಡುತ್ತಿದೆ. ಆದರೆ ಇದಕ್ಕೆ ಚೀನಾ ಸೇನೆ ಸಿಬ್ಬಂದಿಗಳು ಅಡ್ಡಿ ಉಂಟು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಭಾರತೀಯ ಸೇನೆಯ ಅಧಿಕಾರಿಗಳು ಈ ಮಾಹಿತಿಯನ್ನು ಅಲ್ಲಗಳೆದಿದ್ದು, ಚೀನಾದ ಸೇನಾ ಸಿಬ್ಬಂದಿಗಳು ಗಡಿ ನಿಯಂತ್ರಣ ರೇಖೆಯನ್ನು ದಾಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಗಡಿ ನಿಯಂತ್ರಣ ರೇಖೆ ಪ್ರದೇಶದಲ್ಲಿ ಕಾಲುವೆ ನಿರ್ಮಾಣವಾಗುತ್ತಿರುವ ವಿಷಯದ ಬಗ್ಗೆ ಉಭಯ ರಾಷ್ಟ್ರಗಳ ಸೇನಾ ಅಧಿಕಾರಿಗಳು ಧ್ವಜ ಸಭೆ ನಡೆಸಿ ವಿವಾದವನ್ನು ಬಗೆಹರಿಸಿಕೊಳ್ಳಲಿದ್ದಾರೆ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರತ ಸರ್ಕಾರ ಟಿಬೆಟ್ ನ ಬೌದ್ಧ ಧರ್ಮ ಗುರುಗಳಾದ ದಲೈ ಲಾಮಾ ಅವರಿಗೆ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲು ಅವಕಾಶ ನೀಡಿರುವ ಕಾರಣದಿಂದ ಭಾರತಕ್ಕೆ ತಿರುಗೇಟು ನೀಡಲು ಚೀನಾ ಸೇನೆ ಗಡಿ ನಿಯಂತ್ರಣ ರೇಖೆ ದಾಟಿ ಡೆಮ್ ಚೋಕ್ ಪ್ರದೇಶಕ್ಕೆ ನುಗ್ಗಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.
ಭಾರತ ಸರ್ಕಾರದಿಂದ ನಡೆಯುತ್ತಿರುವ ಕಾಮಗಾರಿಯನ್ನು ತಡೆಗಟ್ಟಲು ಸುಮಾರು 55 ಚೀನಾ ತುಕಡಿಗಳು ಡೆಮ್ ಚೋಕ್ ಪ್ರದೇಶಕ್ಕೆ ನುಗ್ಗಿದ್ದು, ಚೀನಾ ಸೇನಾ ಪಡೆಗೆ ಪ್ರತಿಯಾಗಿ ಭಾರತೀಯ ಸೇನೆ, ಇಂಡೋ ಟಿಬೆಟಿಯನ್ ಬಾರ್ಡರ್( ಐಟಿಬಿಪಿ) ಪಡೆ ಸಹ ಸ್ಥಳಕ್ಕೆ ಧಾವಿಸಿವೆ. ಡೆಮ್ ಚೋಕ್ 11,500 ಅಡಿ ಎತ್ತರದಲ್ಲಿದ್ದು, ಇಂಡಸ್( ಸಿಂಧೂ) ಟಿಬೆಟ್ ನಿಂದ ಭಾರತವನ್ನು ಪ್ರವೇಶಿಸುವ ಮಾರ್ಗವಾಗಿದೆ. ಚೀನಾ ಪಡೆ ಡೆಮ್ ಚೋಕ್ ಪ್ರದೇಶಕ್ಕೆ ಪ್ರವೇಶಿಸಿ ಸರ್ಕಾರದ ಕಾಮಗಾರಿಯನ್ನು ನಿಲ್ಲಿಸುತ್ತಿರುವುದು ಇದೆ ಮೊದಲಲ್ಲ. 2014 ರಲ್ಲೂ ಇಂತಹದ್ದೇ ಘಟನೆ ನಡೆದಿತ್ತು.