ಶ್ರೀನಗರ: ಉಗ್ರ ಬುರ್ಹಾನ್ ಹತ್ಯೆ ಖಂಡಿಸಿ ನಡೆಸಲಾಗುತ್ತಿದ್ದ ಪ್ರತಿಭಟನೆಯಿಂದಾಗಿ ಈಗಾಗಲೇ ನಲುಗಿ ಹೋಗಿರುವ ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಪ್ರತಿಭಟನಾಕಾರರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ 12 ಮಂದಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.
ಶ್ರೀನಗರದ ಈದ್ಘಾ ಪ್ರದೇಶದ ನಿವಾಸಿಯಾಗಿರುವ ಕ್ವಾಸೆಲ್ ಸೋಫಿ ಎಂಬ 16 ವರ್ಷದ ಬಾಲಕನೋರ್ವ ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ. ಕಾಣೆಯಾದ 6 ದಿನಗಳ ಬಳಿಕ ಬಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬಾಲಕ ಮೃತಪಟ್ಟಿದ್ದಾನೆ.
ಭದ್ರತಾ ಸಿಬ್ಬಂದಿಗಳು ಬಾಲಕನಿಗೆ ವಿಷಪ್ರಾಷಣವನ್ನು ಮಾಡಿದ್ದರಿಂದ ಆತ ಮೃತಪಟ್ಟಿದ್ದಾನೆಂದು ಸ್ಥಳೀಯರು ಆರೋಪವನ್ನು ವ್ಯಕ್ತಪಡಿಸಿದ್ದಾರೆ.
ಇಂದು ಬೆಳಿಗ್ಗೆ ಬಾಲಕನ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಗುತ್ತಿತ್ತು. ಈ ವೇಳೆ ಕೆಲವರು ಪ್ರತಿಭಟನೆ ನಡೆಸಲು ಆರಂಭಿಸಿದ್ದಾರೆ. ಅಲ್ಲದೆ, ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟವನ್ನು ನಡೆಸಿದ್ದಾರೆ.
ಇದರಿಂದಾಗಿ ಸ್ಥಳದಲ್ಲಿ ಪ್ರತಿಭಟನಾಕಾರರು ಹಾಗೂ ಭದ್ರತಾ ಸಿಬ್ಬಂದಿಗಳ ನಡುವೆ ಘರ್ಷಣೆ ಏರ್ಪಟ್ಟಿದೆ. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸುವ ಸಲುವಾಗಿ ಭದ್ರತಾ ಸಿಬ್ಬಂದಿಗಳು ಪೆಲೆಟ್ ಗನ್ ಗಳನ್ನು ಬಳಕೆ ಮಾಡಿದ್ದಾರೆ. ಈ ವೇಳೆ 6 ಮಂದಿ ಪೆಲೆಟ್ ಗನ್ ದಾಳಿಯಿಂದ ಗಾಯಗೊಂಡು, ಮತ್ತೆ 6 ಮಂದಿ ಘರ್ಷಣೆ ವೇಳೆ ಗಾಯಗೊಂಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಘರ್ಷಣೆ ಹಿನ್ನೆಲೆಯಲ್ಲಿ ಶ್ರೀನಗರದಾದ್ಯಂತ ಅಂಗಡಿ ಮುಗ್ಗಟ್ಟುಗಳು, ವ್ಯಾಪಾರ ವಹಿವಾಟುಗಳು ಬಂದ್ ಆಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.