ಮುಂಬೈನಲ್ಲಿ ಭೀಕರ ಅಪಘಾತ: 6 ಜನರ ಸಾವು, ಮೂವರಿಗೆ ಗಂಭೀರ ಗಾಯ
ಮಹಾನಗರಿ ಮುಂಬೈನ ರಸ್ತೆಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಕಾರೊಂದು ರಸ್ತೆಯ ಡಿವೈಡರ್'ಗೆ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಸಾವನ್ನಪ್ಪಿ ಮೂವರಿಗೆ ಗಂಭೀರವಾಗಿ...
ಮುಂಬೈ: ಮಹಾನಗರಿ ಮುಂಬೈನ ರಸ್ತೆಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಕಾರೊಂದು ರಸ್ತೆಯ ಡಿವೈಡರ್'ಗೆ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಸಾವನ್ನಪ್ಪಿ ಮೂವರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಶನಿವಾರ ನಡೆದಿದೆ.
ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ವಾಡಿ ಬಂದರ್ ಬಳಿ ಅಪಘಾತ ಸಂಭವಿಸಿದೆ. ಟ್ಯಾಕ್ಸಿಯೊಂದು 9 ಮಂದಿಯನ್ನು ಹೊತ್ತು ದಕ್ಷಿಣ ಮುಂಬೈನಲ್ಲಿರುವ ಮುಂಬದೇವಿ ದೇಗಲುಕ್ಕೆ ತೆರಳುತ್ತಿತ್ತು. ವಾಡಿ ಬಂದರ್ ಬಳಿ ಬರುತ್ತಿದ್ದಂತೆಯೇ ಚಾಲಕ ಕಾರಿನ ಮೇಲಿದ್ದ ನಿಯಂತ್ರಣವನ್ನು ಕಳೆದುಕೊಂಡಿದ್ದಾನೆ. ಈ ವೇಳೆ ಕಾರು ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ 6 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರವಾಗಿ ಗಾಯವಾಗಿದೆ ಎಂದು ವರದಿಗಳು ತಿಳಿಸಿವೆ.
ದುರ್ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನು ಜೆಜೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೃತರನ್ನು ರಾಜ್ ಕುಮಾರ್ ವರ್ಮಾ (8), ಅನಂತ್ರ ವರ್ಮಾ (35), ಹರ್ಕೇಶ್ ವರ್ಮಾ (45), ರಾಜ್ ಶ್ರೀ ವರ್ಮಾ (35), ರಾಗಿಣಿ ವರ್ಮಾ (20) ಮತ್ತು ಆಶಾ ವರ್ಮಾ (12) ಎಂದು ಗುರ್ತಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.