ಚೆನ್ನೈ: ಭೋಪಾಲ್ ಕೇಂದ್ರೀಯ ಕಾರಾಗೃಹದಿಂದ ತಪ್ಪಿಸಿಕೊಂಡ ಸಿಮಿ ಉಗ್ರರ ಎನ್ ಕೌಂಟರ್ ಪ್ರಕರಣ ಕುರಿತ ತನಿಖೆಯ ಆಗ್ರಹ ಕೇವಲ ಸಂಶಯ ನಿವಾರಣೆಗಾಗಿ ಮಾತ್ರವಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರು ಹೇಳಿದ್ದಾರೆ.
ಸಿಮಿ ಉಗ್ರರ ಎನ್ ಕೌಂಟರ್ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಎನ್ ಕೌಂಟರ್ ಪ್ರಕರಣ ಕುರಿತಂತೆ ನಾಯಕರು ತನಿಖೆಗೆ ಆಗ್ರಹಿಸುತ್ತಿದ್ದಾರೆ. ತನಿಖೆಗೆ ಆಗ್ರಹಿಸಿದ ಮಾತ್ರಕ್ಕೆ ಆಗ್ರಹ ವ್ಯಕ್ತಪಡಿಸುತ್ತಿರುವವರೆಲ್ಲರೂ ಉಗ್ರರಿಗೆ ಬೆಂಬಲ ಸೂಚಿಸುತ್ತಿದ್ದಾರೆಂದು ಅರ್ಥವಲ್ಲ. ಎನ್'ಕೌಂಟರ್ ಕುರಿತಂತೆ ಇರುವ ಸಂಶಯಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಅಷ್ಟೇ ಎಂದು ಹೇಳಿದ್ದಾರೆ.
ಒಂದು ವೇಳೆ ಸಿಮಿ ಉಗ್ರರರನ್ನು ಎನ್ ಕೌಂಟರ್ ಮಾಡದಿದ್ದರೆ, ಅವರು ತಪ್ಪಿಸಿಕೊಂಡಿದ್ದರೂ ಸಾಕಷ್ಟು ಪ್ರಶ್ನೆಗಳು ಹಾಗೂ ಸಂಶಯಗಳು ಉದ್ಬವಗೊಳ್ಳುತ್ತಿತ್ತು. ಉಗ್ರರು ಹೇಗೆ ತಪ್ಪಿಸಿಕೊಂಡರು. ಅವರಿಗೆ ಯಾರು ಸಹಾಯವನ್ನು ಮಾಡಿದ್ದರು ಎಂಬೆಲ್ಲಾ ಪ್ರಶ್ನೆಗಳು ಮೂಡುತ್ತಿದ್ದವು. ಈಗಲೂ ಅದೇ ರೀತಿಯ ಸಂಶಯಗಳು ಮೂಡಿವೆ.
ಉಗ್ರರಿಗೆ ಬೆಂಬಲ ಸೂಚಿಸುತ್ತಿರುವುದಾಗಿ ಯಾರೊಬ್ಬರೂ ಮಾತನಾಡುತ್ತಿಲ್ಲ. ತನಿಖೆಗೆ ಆಗ್ರಹಿಸುತ್ತರುವವರನ್ನು ದೇಶದ್ರೋಹಿಗಳೆಂದರೆ ಇದರ ಅರ್ಥವೇನು? ಎಂದು ಪ್ರಶ್ನಿಸಿದ್ದಾರೆ.
ಸಾಕಷ್ಟು ಆಗ್ರಹಗಳ ಬಳಿಕ ಕೊನೆಗೂ ಸರ್ಕಾರ ಪ್ರಕರಣವನ್ನು ತನಿಖೆ ನಡೆಸಲು ಒಪ್ಪಿಗೆ ಸೂಚಿಸಿದೆ. ಇದನ್ನು ಮೊದಲ ದಿನವೇ ಏಕೆ ಸರ್ಕಾರ ಮಾಡಲಿಲ್ಲ?...ಸಾಕಷ್ಟು ಒತ್ತಡ ಹಾಗೂ ಆಗ್ರಹಗಳು ವ್ಯಕ್ತವಾದ ಬಳಿಕವೇ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಜೈಲಿನಿಂದ ಪರಾರಿಯಾದವರನ್ನು ಬಂಧಿಸಲು ಸಾಧ್ಯವೇ ಇಲ್ಲವೇ? ಎನ್ ಕೌಂಟರ್ ನಡೆದಿರುವುದು ಸತ್ಯವೇ ಅಥವಾ ಸುಳ್ಳೇ? ಇದೊಂದು ವಿವಾದಿತ ವಿಚಾರವಾಗಿದೆ.
ಎನ್ ಕೌಂಟರ್ ಕುರಿತ ಕೆಲ ವಿಡಿಯೋಗಳು ಇಂದು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಪೊಲೀಸರು ಎನ್ ಕೌಂಟರ್ ಮಾಡಿರುವ ಕುರಿತಂತೆ ಕೆಲ ಗ್ರಾಮಸ್ಥರು ಮಾತನಾಡುತ್ತಿದ್ದಾರೆ. ಇದು ಸತ್ಯವೋ ಅಥವಾ ಸುಳ್ಳೋ ಎಂಬುದನ್ನು ತಿಳಿಯಲು ತನಿಖೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ.