ನವದೆಹಲಿ: ಒನ್ ರ್ಯಾಂಕ್ ಒನ್ ಪೆನ್ಶನ್ ಜಾರಿ ಸಂಬಂಧ ಮಾಜಿ ಸೈನಿಕ ರಾಮ್ ಕಿಶನ್ ಗ್ರೆವಾಲ್ ಆತ್ಮಹತ್ಯೆ ಪ್ರಕರಣ ತೀವ್ರ ರಾಜಕೀಯ ಸ್ವರೂಪ ಪಡೆಯುತ್ತಿರುವ ಬೆನ್ನಲ್ಲೇ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, ಶೇ.95ರಷ್ಟು ಮಾಜಿ ಸೈನಿಕರು ಈಗಾಗಲೇ ಒಆರ್ ಒಪಿ ಯೋಜನೆಯ ಲಾಭ ಪಡೆದಿದ್ದಾರೆ ಮತ್ತು ಆ ಬಗ್ಗೆ ಅವರಿಗೆ ಖುಷಿ ಇದೆ ಎಂದು ಶನಿವಾರ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪರಿಕ್ಕರ್, ಶೇ.95ರಷ್ಟು ಮಾಜಿ ಸೈನಿಕರು ಈಗಾಗಲೇ ಒಆರ್ ಒಪಿ ಯೋಜನೆಯ ಲಾಭ ಪಡೆದಿದ್ದಾರೆ. ಇನ್ನುಳಿದ ಶೇ.5ರಷ್ಟು ಮಾಜಿ ಸೈನಿಕರು ತುಂಬಾ ಹಳೆಯ ಪಿಂಚಣಿದಾರರಾಗಿದ್ದು, ಅವರ ದಾಖಲೆಗಳು ಅಪೂರ್ಣವಾಗಿವೆ. ಹೀಗಾಗಿ ವಿಳಂಬವಾಗುತ್ತಿದೆ. ಆದರೂ ಮುಂದಿನ ಎರಡು ತಿಂಗಳಲ್ಲಿ ಅವರಿಗೂ ಒಆರ್ ಒಪಿ ಲಾಭ ಸಿಗುವಂತೆ ಮಾಡಲಾಗುವುದು ಎಂದಿದ್ದಾರೆ.
ಕಳೆದ 43 ವರ್ಷಗಳಿಂದ ಜಾರಿಯಾಗದ ಒಆರ್ ಒಪಿ ಯೋಜನೆಯನ್ನು ಎನ್ ಡಿಎ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ರಕ್ಷಣಾ ಸಚಿವರು ತಿಳಿಸಿದ್ದಾರೆ.
ಕೆಲವು ತಾಂತ್ರಿಕ ಕಾರಣ ಮತ್ತು ದಾಖಲೆಗಳ ಸಮಸ್ಯೆಯಿಂದಾಗಿ ಒಟ್ಟು 20 ಲಕ್ಷ ಮಾಜಿ ಸೈನಿಕರ ಪೈಕಿ ಕೇವಲ 1 ಲಕ್ಷ ಮಾಜಿ ಸೈನಿಕರಿಗೆ ಮಾತ್ರ ಒಆರ್ ಒಪಿ ಯೋಜನೆಯ ಲಾಭ ಸಿಕ್ಕಿಲ್ಲ. ಶೀಘ್ರದಲ್ಲೇ ಆ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.