ಕೇಂದ್ರ ಸಚಿವ ಜಿತೇಂದ್ರ ಸಿಂಗ್
ಕತುವಾ: ಕಾಶ್ಮೀರದಲ್ಲಿ ಶಾಲೆಗಳ ಪುನಾರಂಭಕ್ಕಾಗಿ ಒತ್ತಾಯಿಸಿ ವಿದ್ಯಾರ್ಥಿಗಳೇ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಪ್ರತ್ಯೇಕತಾವಾದಿಗಳ ವಿರುದ್ಧ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳೇ ಸ್ವಇಚ್ಛೆಯಿಂದ ಪೋಷಕರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ, ಈ ಬೆಳವಣಿಗೆ ಅಕ್ಷರ ಸಹ ಕಾಶ್ಮೀರ ಪ್ರತ್ಯೇಕತಾವಾದಿಗಳ ವಿರುದ್ಧ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ ಎಂಬುದನ್ನು ತೋರಿಸುತ್ತಿದೆ ಎಂದು ಕೇಂದ್ರ ಸಚಿವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಾಶ್ಮೀರದಲ್ಲಿ ಸದ್ಯಕ್ಕೆ ಕಂಡುಬರುತ್ತಿರುವ ಪರಿಸ್ಥಿತಿ, ಶಾಲೆಗಳು ಪುನಾರಂಭಗೊಳ್ಳುವುದು ಬೇಕಿಲ್ಲದ ಕಾಶ್ಮೀರ ಕೇಂದ್ರಿತ ರಾಜಕಾರಣಿಗಳ ಮನಸ್ಥಿತಿಯನ್ನು ತೋರಿಸುತ್ತದೆ, ಕಾಶ್ಮೀರದಲ್ಲಿ ಉಂಟಾಗಿರುವ ವಾತಾವರಣದ ಧನಾತ್ಮಕ ಅಂಶದತ್ತ ಗಮನಹರಿಸಿದರೆ, ಇಲ್ಲಿನ ಅಶಾಂತಿಯ ವಾತಾವರಣ ಕಾಶ್ಮೀರ ಕೇಂದ್ರಿತ ರಾಜಕಾರಣಿಗಳ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಅವಕಾಶ ನೀಡಿದೆ ಎಂದು ಜಿತೇಂದ್ರ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಕಾಶ್ಮೀರ ಕೇಂದ್ರಿತ ರಾಜಕಾರಣಿಗಳಿಗೆ ಮಕ್ಕಳು ಶಾಲೆಗೆ ಹೋಗುವುದು ಬೇಕಾಗಿಲ್ಲ, ಬದಲಾಗಿ ಬೀದಿಯಲ್ಲಿ ನಿಂತು ಕಲ್ಲು ಹೊಡೆಯಬೇಕೆಂದು ಬಯಸುತ್ತಾರೆ. ಆದರೆ ಅವರ ಮಕ್ಕಳನ್ನು ಮಾತ್ರ ವಿದೇಶದಲ್ಲಿರಿಸಿ ಉತ್ತಮ ಶಿಕ್ಷಣ ಕೊಡಿಸುತ್ತಾರೆ ಎಂದಿರುವ ಕೇಂದ್ರ ಸಚಿವರು ವಿದ್ಯಾರ್ಥಿಗಳ ಭವಿಷ್ಯ ಹಾಳಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಹಾಗೂ ರಾಜ್ಯಸರ್ಕಾರಗಳು ಶಾಲೆಗಳನ್ನು ಪುನಾರಂಭ ಮಾಡುವುದಕ್ಕೆ ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಕಾಶ್ಮೀರದ ಶಾಲೆಗಳ ಮೇಲೆ ಪ್ರತ್ಯೇಕತಾವಾದಿಗಳು, ಉಗ್ರರು ದಾಳಿ ನಡೆಸಿ ಬೆಂಕಿ ಹಚ್ಚುತ್ತಿರುವುದರಿಂದ ಹಲವು ದಿನಗಳಿಂದ ಅಲ್ಲಿನ ಶಾಲೆಗಳನ್ನು ಮುಚ್ಚಲಾಗಿದೆ.