ಕೊತಾಗೂಡೆಮ್: ಭಾರತದಿಂದ ನಾಪತ್ತೆಯಾಗಿ ಪಾಕಿಸ್ತಾನದಿಂದ ಹಿಂತಿರುಗಿರುವ ಮೂಕ ಹಾಗೂ ಕಿವುಡ ಯುವತಿ ಗೀತಾ ಪೋಷಕರ ಪತ್ತೆಗಾಗಿ ಜಜ್ಜರ್ಲಾ ಕೃಷ್ಣ ಮತ್ತು ಆತನ ಪತ್ನಿ ಗೋಪಮ್ಮ ಅವರ ಡಿಎನ್ ಎ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿದೆ.
ತೆಲಂಗಾಣದ ಜೊಲುರ್ಪುದು ಮಂಡಲ್ ನ ನರಸಾಪುರಂ ನವರಾದ ಈ ದಂಪತಿ ಗೀತಾ ತಮ್ಮ ಮಗಳೆಂದು ಹೇಳಿದ್ದರು. ಹೀಗಾಗಿ ಇವರ ಡಿಎನ್ ಎ ಪರೀಕ್ಷೆ ಮಾಡಿ ಜೈವಿಕ ಪೋಷಕರು ಯಾರು ಎಂದು ಪತ್ತೆ ಹಚ್ಚಲು ಈ ಕ್ರಮ ಕೈಗೊಳ್ಳಲಾಗಿದೆ.
ನಾಲ್ಕು ವರ್ಷದ ಮಗುವಾಗಿದ್ದಾಗ ಮಾತು ಬರದ ಕಿವಿ ಕೇಳದ ಗೀತಾ ಭಾರತದಿಂದ ತಪ್ಪಿಸಿಕೊಂಡು ಪಾಕಿಸ್ತಾನ ತಲುಪಿದ್ದಳು. ಕರಾಚಿ ಮೂಲದ ಎನ್ ಜಿಒ ಸಂಸ್ಥೆಯೊಂದು ಗೀತಾಗೆ ಆಶ್ರಯ ನೀಡಿತ್ತು, ಆಕೆ ವಾಪಸ್ ತನ್ನ ತವರಿಗೆ ಹೋಗಬೇಕು ಎಂಬ ಇಚ್ಚೆ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಸಂಪರ್ಕಿಸಿ ಆಕೆಯನ್ನು ಭಾರತಕ್ಕೆ ಕರೆತಂದು ಬಿಡಲಾಗಿತ್ತು.
ಈ ಮೊದಲು ಮೂರು ದಂಪತಿ ಗೀತಾ ತಮ್ಮ ಮಗಳೆಂದು ಹೇಳಿದ್ದರು. ಹಾಗಾಗಿ ಅವರ ಡಿಎನ್ ಎ ಪರೀಕ್ಷೆ ಮಾಡಲಾಗಿತ್ತು, ಆದರೆ ಅವರ್ಯಾರು ಗೀತಾ ಜೈವಿಕ ಪೋಷಕರಲ್ಲ ಎಂಬುದಾಗಿ ತಿಳಿದು ಬಂದಿತ್ತು. ಈಗ ಈಗ ಕೃಷ್ಣಯ್ಯ ದಂಪತಿ ಗೀತಾ ತಮ್ಮ ಮಗಳು ಎಂದು ಹೇಳಿರುವ ಹಿನ್ನೆಲೆಯಲ್ಲಿ ಅವರ ಡಿಎನ್ ಎ ಪರೀಕ್ಷೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅವಕಾಶ ಮಾಡಿಕೊಟ್ಟಿದೆ.