ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದ ವಿರುದ್ಧ ಯಾವಾಗಲೂ ಸಮರ್ಥವಾಗಿ ಹೋರಾಡುತ್ತಿದ್ದು, 500 ಹಾಗೂ 1000 ರೂ ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿರುವುದು ಅತ್ಯದ್ಭುತವಾದ ಕ್ರಮ ಎಂದು ಇನ್ ಫೋಸಿಸ್ ಸ್ಥಾಪಕ ಉದ್ಯಮಿ ನಾರಾಯಣ ಮೂರ್ತಿ ಹೇಳಿದ್ದಾರೆ.
ಎಕನಾಮಿಕ್ ಟೈಮ್ಸ್ ಗೆ ನೀಡಿರುವ ಚುಟುಕು ಸಂದರ್ಶನದಲ್ಲಿ ಮಾತನಾಡಿರುವ ನಾರಾಯಣ ಮೂರ್ತಿ, ಭಯೋತ್ಪಾದನೆ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಕೈಗೊಂಡಿರುವ ಈ ಕ್ರಮ ಶ್ಲಾಘನೀಯವಾದದ್ದು, ಯೋಗ್ಯ ಆರ್ಥಿಕ ಪ್ರಗತಿ ಸಾಧಿಸಬೇಕಾದರೆ ಇಂಥಹ ಕ್ರಮ ಅಗತ್ಯವಿದ್ದು ಸರ್ಕಾರದ ನಡೆಯನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.
ಕಪ್ಪುಹಣ ಹೊಂದಿರದ ಸಾಮಾನ್ಯ ಜನತೆ ನೋಟುಗಳನ್ನು ಬದಲಿಸಿಕೊಳ್ಳಲು ಕೇಂದ್ರ ಸರ್ಕಾರ ಹಲವು ಮಾರ್ಗಗಳನ್ನು ಸೂಚಿಸಿದೆ. ಪ್ರಾಮಾಣಿಕ ವ್ಯಕ್ತಿಗಳು ಕೇಂದ್ರ ಸರ್ಕಾರದ ನಡೆಯನ್ನು ಸ್ವಾಗತಿಸುತ್ತಿದ್ದಾರೆ, ಅಪ್ರಮಾಣಿಕ ವ್ಯಕ್ತಿಗಳು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.