ಲಖನೌ: ಕಪ್ಪುಹಣವನ್ನು ನಿಯಂತ್ರಿಸುವ ನಿಟ್ಟಿನಲ್ಲಿ 500 ಮತ್ತು 1000 ರು. ನೋಟುಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶ ಇದೀಗ ರಾಜಕೀಯ ಪಕ್ಷಗಳಿಗೆ ವರದಾನವಾಗಿ ಬದಲಾಗಿದ್ದು, ಮತದಾರರ ಸೆಳೆಯಲು ಅತ್ಯುತ್ತಮ ವೇದಿಕೆಯನ್ನು ಕಲ್ಪಿಸಿದೆ. ಕೆಲ ರಾಜಕೀಯ ಕಾರ್ಯಕರ್ತರು ಮತದಾರರಿಗೆ ಈಗಿನಿಂದಲೇ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಇದೇ 2017 ಜನವರಿಯಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಚುನಾವಣೆಗೆ ಹಂಚಿಕೆ ಮಾಡಲು ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಮತದಾರರಿಗೆ ಹಂಚಿಕೆ ಮಾಡಲು ಸಾವಿರಾರು ಕೋಟಿ ಕಪ್ಪು ಹಣ ಸಿದ್ಧವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಇವುಗಳ ಹಂಚಿಕೆಯಾಗಲಿದೆ. ಆದರೆ ಇದಕ್ಕೆ ನೋಟ್ ಗಳ ಮೇಲೆ ನಿಷೇಧ ಹೇರುವ ಮೂಲಕ ಕೇಂದ್ರ ಸರ್ಕಾರ ನಿಯಂತ್ರಣ ಹೇರಿದೆ ಎಂದೇ ಹೇಳಲಾಗುತ್ತಿತ್ತು. ಆದರೆ ಸರ್ಕಾರ ಚಾಪೆ ಕೆಳಗೆ ತೂರಿದರೆ, ರಾಜಕೀಯ ಪಕ್ಷಗಳು ರಂಗೋಲಿ ಕೆಳಗೆ ತೂರುವ ಕೆಲಸ ಮಾಡುತ್ತಿದ್ದು, ಈಗಾಗಲೇ ತಮ್ಮ ಬಳಿ ಇರುವ ಕಪ್ಪು ಹಣವನ್ನು ಮತದಾರರಿಗೆ ಹಂಚಿಕೆ ಮಾಡುತ್ತಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಇದಕ್ಕೆ ಇಂಬು ನೀಡುವಂತೆ ಉತ್ತರ ಪ್ರದೇಶದಾದ್ಯಂತ ಕಾರ್ಯಾಚರಣೆ ನಡೆಸಿರುವ ಚುನಾವಣಾ ಅಧಿಕಾರಿಗಳು ಕೆಲ ಶಂಕಿತ ವ್ಯಕ್ತಿಗಳನ್ನು ಬಂಧಿಸಿದ್ದು, ಅವರ ಬಳಿ ಆಪಾರ ಪ್ರಮಾಣದ ಹಳೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಚುನಾವಣೆಗೆ ಇನ್ನೂ 2 ತಿಂಗಳು ಇರುವಂತೆಯೇ ಪ್ರಚಾರಕ್ಕೆ ಧುಮುಕಿರುವ ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸಿಕೊಳ್ಳಲು ಹಣ ಹಂಚಿಕೆ ಮಾಡುತ್ತಿವೆಯಂತೆ.
ಬ್ಯಾಂಕ್ ಗಳಿಗೆ ನೀಡಿ ಬದಲಿಸಿಕೊಳ್ಳುವಂತೆ ಪುಕ್ಕಟೆ ಸಲಹೆ!
ಪ್ರಸ್ತುತ ರಾಜಕೀಯ ಪಕ್ಷಗಳ ಬಳಿ ಇರುವ ಅಪಾರ ಪ್ರಮಾಣದ ಕಪ್ಪುಹಣವನ್ನು ಮತದಾರರಿಗೆ ಹಂಚಿಕೆ ಮಾಡಿ ಅವುಗಳನ್ನು ಬ್ಯಾಂಕ್ ಗಳಿಗೆ ನೀಡಿ ಬದಲಿಸಿಕೊಳ್ಳುವಂತೆ ಮತದಾರರಿಗೆ ಪುಕ್ಕಟೆ ಸಲಹೆ ನೀಡುತ್ತಿವೆಯಂತೆ. ರಾಜಕೀಯ ಪಕ್ಷಗಳ ಕೆಲ ಏಜೆಂಟರುಗಳು ಈಗಾಗಲೇ ಹಣ ಹಂಚಿಕೆಯಲ್ಲಿ ತೊಡಗಿದ್ದು, ಕಾರ್ಯಕರ್ತರ ಮೂಲಕ ತಮ್ಮ ಪಕ್ಷಕ್ಕೇ ಮತ ನೀಡುವಂತೆ ಭಾರಿ ಪ್ರಮಾಣದಲ್ಲಿ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕೇಂದ್ರ ಸರ್ಕಾರವೇನೋ ಗರಿಷ್ಟ ಪ್ರಮಾಣದ ನೋಟುಗಳನ್ನು ನಿಷೇಧಿಸಿದೆಯಾದರೂ, ಉತ್ತರ ಪ್ರದೇಶದಲ್ಲಿ ಮಾತ್ರ ಈ ನೋಟುಗಳು ಎಗ್ಗಿಲ್ಲದೆ ಚಲಾವಣೆಯಾಗುತ್ತಿದೆಯಂತೆ. ನೋಟುಗಳ ಬದಲಾವಣೆಗೆ ಕೇಂದ್ರ ಸರ್ಕಾರ 20 ದಿನಗಳ ಕಾಲಾವಕಾಶ ನೀಡಿರುವುದನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳ ಕಾರ್ಯಕರ್ತರು ಬ್ಯಾಂಕ್ ಗಳಿಗೆ ನೀಡಿ ಈ ಹಣವನ್ನು ಬದಲಿಸಿಕೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ.
ಹೀಗಾಗಿ ಕಪ್ಪುಹಣವನ್ನು ತಡೆಯುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಉತ್ತರ ಪ್ರದೇಶದಲ್ಲಿ ಯಾವುದೇ ಕಿಮ್ಮತ್ತು ಇಲ್ಲ ಎಂದು ಖ್ಯಾತ ಆರ್ಥಿಕ ತಜ್ಞ ಎಸ್ ಪಿ ತಿವಾರಿ ಅವರು ಅಭಿಪ್ರಾಯಪಟ್ಟಿದ್ದಾರೆ. "ಸಾಮಾನ್ಯವಾಗಿ ಪ್ರತಿ ಚುನಾವಣೆಯಲ್ಲೂ ರಾಜಕೀಯ ಪಕ್ಷಗಳಿಗೆ ಕಪ್ಪುಹಣವೇ ಆರ್ಥಿಕ ಮೂಲವಾಗಿರುತ್ತದೆ. ಗರಿಷ್ಠ ಪ್ರಮಾಣದ ನೋಟುಗಳನ್ನು ನಿಷೇಧಿಸುವ ಮೂಲಕ ಉತ್ತರ ಪ್ರದೇಶ ಚುನಾವಣೆಯಲ್ಲಿ ಚುನಾವಣಾ ಅಕ್ರಮಗಳನ್ನು ತಡೆಯಬಹುದು ಎಂದು ಕೇಂದ್ರ ಸರ್ಕಾರ ಎಣಿಸಿದ್ದರೆ ಖಂಡಿತಾ ಅದು ತಪ್ಪು. ಏಕೆಂದರೆ ಈಗಾಗಲೇ ರಾಜಕೀಯ ಪಕ್ಷಗಳು ತಮ್ಮ ಬಳಿ ಇರುವ ಕಪ್ಪು ಹಣವನ್ನು ಜನತೆಗೆ ನೀಡಿ ಬದಲಿಸಿಕೊಳ್ಳುವಂತೆ ಸಲಹೆ ನೀಡುತ್ತಿವೆ. ಮತದಾರರು ಕೂಡ ರಾಜಕೀಯ ಕಾರ್ಯಕರ್ತರಿಂದ ಹಣ ಪಡೆದು ಬ್ಯಾಂಕುಗಳಲ್ಲಿ ನೀಡಿ ನೋಟು ಬದಲಾಯಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.
ಇಡೀ ದೇಶದ ಗಮನ ಸೆಳೆದಿರುವ ಮತ್ತು ಮುಂದಿನ ಲೋಕಸಭಾ ಚುನಾವಣೆಯ ನಿಟ್ಟಿನಲ್ಲಿ ಪ್ರಬಲ ಸೂಚಕವಾಗಲಿದೆ ಎಂದು ಹೇಳಲಾಗುತ್ತಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ದೇಶದ ಚುನಾವಣಾ ಇತಿಹಾಸದಲ್ಲಿ ಅತೀ ಹೆಚ್ಚು ಕಪ್ಪುಹಣ ಚಲಾವಣೆಯಾಗುವ ರಾಜ್ಯ ಎಂಬ ಕುಖ್ಯಾತಿ ಕೂಡ ಉತ್ತರ ಪ್ರದೇಶಕ್ಕಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆಯ ವರದಿಯಂತೆ ಉತ್ತರ ಪ್ರದೇಶದಲ್ಲಿ ನಡೆದ ಕಳೆದ ಮೂರು ಚುನಾವಣೆಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳಿಂದ ಒಟ್ಟು 2,356 ಕೋಟಿ ಹಣ ವೆಚ್ಚವಾಗಿದೆಯಂತೆ. ಇವುಗಳಲ್ಲಿ ರಾಜಕೀಯ ಪಕ್ಷಗಳ ಹಣ ಘೋಷಣೆ ಮತ್ತು ಅಧಿಕಾರಿಗಳು ವಶಪಡಿಸಿಕೊಂಡಿರುವ ಹಣ ಕೂಡ ಸೇರಿದೆ. ಈ ಪೈಕಿ 1,039 ಕೋಟಿ ಹಣ ನಗದು ರೂಪದಲ್ಲಿ ಹಂಚಿಕೆಯಾಗಿದ್ದರೆ, 1,300 ಕೋಟಿ ಹಣ ಚೆಕ್ ಮೂಲಕ ಹಂಚಿಕೆಯಾಗಿದೆಯಂತೆ. ಇದು ಅಧಿಕೃತ ಮಾಹಿತಿಗಳಾದರೆ ಅನಧಿಕೃತವಾಗಿ ಇದಕ್ಕಿಂತಲೂ 3 ಪಟ್ಟು ಕಪ್ಪು ಹಣ 2004, 2009 ಮತ್ತು 2014ರ ಚುನಾವಣೆಯಲ್ಲಿ ಹರಿದಾಡಿತ್ತು ಎಂದು ಸಂಸ್ಥೆ ಹೇಳಿದೆ.
2014ರ ವಿಧಾನಸಭಾ ಚುನಾವಣೆಯೊಂದರಲ್ಲೇ ಚುನಾವಣಾ ಆಯೋಗ ಒಟ್ಟು 330 ಕೋಟಿ ಅಕ್ರಮ ಹಣವನ್ನು ವಶಪಡಿಸಿಕೊಂಡಿತ್ತು. ಪ್ರಸ್ತುತ ಕೇಂದ್ರ ಸರ್ಕಾರ 1000 ಮತ್ತು 500 ರು.ಗಳನ್ನು ನಿಷೇಧಿಸಿರುವುದರಿಂದ ಮತ್ತು ಮುಂದಿನ ದಿನಗಳಲ್ಲಿ ಈ ಹಣ ಕಿಮ್ಮತ್ತು ಕಳೆದುಕೊಳ್ಳುವುದರಿಂದ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ತಮ್ಮಲ್ಲಿರುವ ಅಷ್ಟೂ ಹಣವನ್ನು ಏಕಕಾಲಕ್ಕೆ ಹೊರ ತಂದು ಮತದಾರರಿಗೆ ಹಂಚುವ ಅವಕಾಶವಿದೆ. ಹೀಗಾಗಿ ಪ್ರಸಕ್ತ ಚುನಾವಣೆಯಲ್ಲಿ ಈ ಹಿಂದೆಂದಿಗಿಂತಲೂ ಭಾರಿ ಪ್ರಮಾಣದ ಕಪ್ಪುಹಣ ಹರಿದಾಡುವ ಶಂಕೆ ವ್ಯಕ್ತವಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
(ಪಿಟಿಐ ವರದಿಯಾಧರಿಸಿ)