ನವದೆಹಲಿ: ಮೊದಲು ನಿಮ್ಮ ಕುಟುಂಬದಲ್ಲಿ ನಡೆಯುತ್ತಿರುವ ಮಹಾಭಾರತಕ್ಕೆ ಅಂತ್ಯ ಹಾಡಿ ನಂತರ ಮಹಾಮೈತ್ರಿ ಬಗ್ಗೆ ಚಿಂತನೆ ನಡೆಸಿ ಎಂದು ಸಮಾಜವಾದಿ ಪಕ್ಷದ ನಾಯಕರಿಗೆ ಬಿಜೆಪಿ ಶುಕ್ರವಾರ ಹೇಳಿದೆ.
ಸಮಾಜವಾದಿ ಪಕ್ಷದಲ್ಲಿ ಉಂಟಾಗಿರುವ ಬಿಕ್ಕಟ್ಟು ಕುರಿತಂತೆ ಮಾತನಾಡಿರುವ ಬಿಜೆಪಿ ವಕ್ತಾರ ನಳಿನ್ ಕೊಹ್ಲಿ ಅವರು, ಸಮಾಜವಾದಿ ಪಕ್ಷದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಿದ್ದು, ತಮ್ಮ ಕುಟುಂಬದಲ್ಲಿ ಮಹಾಭಾರತ ನಡೆಯುತ್ತಿದ್ದರೂ, ಮಹಾಮೈತ್ರಿ ಬಗ್ಗೆ ಪಕ್ಷದ ನಾಯಕರು ಮಾತನಾಡುತ್ತಿದ್ದಾರೆ. ಸಮಾಜವಾದಿ ಪಕ್ಷ ಮೊದಲು ತಮ್ಮೊಳಗೆ ನಡೆಯುತ್ತಿರುವ ಮಹಾಭಾರತಕ್ಕೆ ಅಂತ್ಯ ಹಾಡಬೇಕಿದ್ದು, ನಂತರ ಮಹಾಮೈತ್ರಿ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಅಭಿವೃದ್ಧಿ ಕಾರ್ಯಗಳು ಮೂಲೆಗೆ ಸೇರಿವೆ. ಮೊದಲು ಸಮಾಜವಾದಿ ಪಕ್ಷ ರಾಜ್ಯದಲ್ಲಿ ತಲೆದೋರಿರುವ ಸಮಸ್ಯೆಗಳನ್ನು ಸರಿಪಡಿಸಬೇಕಿದ್ದು, ನಂತರವಷ್ಟೇ ರಾಷ್ಟ್ರೀಯ ಹಿತಾಸಕ್ತಿಗಳ ಬಗ್ಗೆ ಮಾತನಾಡಬಹುದಾಗಿದೆ ಎಂದು ತಿಳಿಸಿದ್ದಾರೆ.