ನವದೆಹಲಿ: ಗರಿಷ್ಠ ಮುಖಬೆಲೆಯ 500, 1000 ರೂ ನೋಟುಗಳ ರದ್ದತಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಕೇಂದ್ರ ಸರ್ಕಾರ ನೋಟುಗಳನ್ನು ನಿಷೇಧಿಸಿರುವುದರಿಂದ ಭಯೋತ್ಪಾದಕರ ಆರ್ಥಿಕ ಮೂಲಕ್ಕೆ ಕತ್ತರಿ ಬಿದ್ದಿದೆ ಎಂದು ಹೇಳಿದ್ದಾರೆ.
ನೋಟುಗಳ ನಿಷೇಧದ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, 500, 1000 ರೂ ನೋಟುಗಳನ್ನು ಬಂದ್ ಮಾಡಿರುವುದು ಭಯೋತ್ಪಾದಕರ ಆರ್ಥಿಕ ಮೂಲಕ್ಕೆ ಬಲವಾದ ಹೊಡೆತ ನೀಡಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪುಹಣದ ವಿರುದ್ಧದ ಕಾರ್ಯಾಚರಣೆಯನ್ನು ಮುಂದುವರೆಸುವುದಾಗಿ ಹೇಳಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ನ.13 ರಂದು ವಿವಿಧ ಯೋಜನೆಗಳ ಉದ್ಘಾಟನೆಗಾಗಿ ಪಣಜಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು, ಈ ವೇಳೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಕಪ್ಪುಹಣವನ್ನು ಹೊರತೆಗೆಯಲು ತಾವು ಮತ್ತಷ್ಟು ಯೋಜನೆ ಹೊಂದಿದ್ದು, ಕಪ್ಪುಹಣದ ವಿರುದ್ಧದ ಕಾರ್ಯಾಚರಣೆ ಮುಂದುವರೆಯಲಿದೆ ಎಂದಿದ್ದರು.