ದೇಶ

ಜನರ ಪ್ರಾರ್ಥನೆಯಿಂದಾಗಿ ನನಗೆ ಪುನರ್ಜನ್ಮ ಸಿಕ್ಕಿದೆ: ಸಿಎಂ ಜಯಲಲಿತಾ

Manjula VN

ಚೆನ್ನೈ: ಅನಾರೋಗ್ಯದಿಂದಾಗಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾದ ಬಳಿಕ ಇದೇ ಮೊದಲ ಬಾರಿಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಅಧಿಕೃತವಾಗಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಜನರ ಪ್ರಾರ್ಥನೆ ಹಾಗೂ ಹರಕೆಯಿಂದಾಗಿ ನನಗೆ ಪುನರ್ಜನ್ಮ ಸಿಕ್ಕಿದೆ ಎಂದು ಭಾನುವಾರ ಹೇಳಿದ್ದಾರೆ.

ಎಐಎಡಿಎಂಕೆ ಪಕ್ಷದ ಪ್ರಧಾನ ಕಚೇರಿಯಲ್ಲಿ 2 ಪುಟಗಳ ಹೇಳಿಕೆಯನ್ನು ಜಯಲಲಿತಾ ಅವರು ಬಿಡುಗಡೆ ಮಾಡಿದ್ದು, ರಾಜ್ಯ ಹಾಗೂ ದೇಶದಾದ್ಯಂತ ಜನರು ಸಲ್ಲಿಸಿದ ಪ್ರಾರ್ಥನೆ ಹಾಗೂ ಹರಕೆ ಪೂಜೆಗಳಿಂದಾಗಿ ನನಗೆ ಮರುಜನ್ಮ ಸಿಕ್ಕಿದೆ. ಈ ವಿಚಾರವನ್ನು ಜನತೆಯೊಂದಿಗೆ ಹಂಚಿಕೊಳ್ಳಲು ನನಗೆ ಸಂತಸವಾಗುತ್ತಿದೆ ಎಂದು ಹೇಳಿದ್ದಾರೆ.

ಜನರ ಪ್ರೀತಿ ನನ್ನ ಮೇಲಿರುವುದರಿಂದ ನನಗೆ ಯಾವುದೇ ಶಕ್ತಿ ಬಾಧಿಸದು. ದೇವರ ದಯೆಯಿಂದ ಪೂರ್ಣ ಪ್ರಮಾಣದಲ್ಲಿ ಗುಣಮುಖಳಾಗಿ ಶೀಘ್ರದಲ್ಲಿಯೇ ಜನರ ಸೇವೆ ಸಲ್ಲಿಸಲು ಕಾಯುತ್ತಿದ್ದೇನೆ. ನ.19 ರಂದು ತಮಿಳುನಾಡಿನ ಅರಾವಕ್ಕುರುಚಿ, ತಾಂಜಾವೂರು, ತಿರುಪ್ಪರನ್ ಕುಂಡ್ರಂ ಮತ್ತು ಪಾಂಡಿಚೇರಿಯ ನೆಲ್ಲಿ ದೊಪೆ ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದ್ದು, ಆಯಾ ಕ್ಷೇತ್ರಗಳಿಗೆ ಬರಲು ನನಗೆ ಸಾಧ್ಯವಾಗುತ್ತಿಲ್ಲ.

ಆಯಾ ಕ್ಷೇತ್ರಗಳ ಕಾರ್ಯಕರ್ತರು ಹಾಗೂ ಮತದಾರರನ್ನು ನೇರವಾಗಿ ಭೇಟಿಯಾಗಲು ಸಾಧ್ಯವಾಗದಿದ್ದರೂ, ನನ್ನ ಹೃದಯ ಮತ್ತು ಚಿಂತನೆ ಎಂದಿಗೂ ನಿಮ್ಮೊಂದಿಗಿರುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ಉಪ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆಲ್ಲಲು ಶ್ರಮ ಪಡುವಂತೆ ಎಐಎಡಿಎಂಕೆ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿಕೊಂಡಿದ್ದಾರೆ.

ಇದೇ ವೇಳೆ ತಮಗೆ ಎದುರಾದ ಅನಾರೋಗ್ಯದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಜನರ ಕುರಿತು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

SCROLL FOR NEXT