ನವದೆಹಲಿ: ದುಬಾರಿ ಬೆಲೆಯ ನೋಟಿನ ಮೇಲೆ ನಿಷೇಧ ಹೇರಿರುವ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಿರಿಯ ಸಚಿವರೊಂದಿಗೆ ಭಾನುವಾರ ತಡರಾತ್ರಿ ದಿಢೀರ್ ಸಭೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಧಿಕೃತ ನಿವಾಸದಲ್ಲಿ ಕಳೆದ ರಾತ್ರಿ ಸಭೆ ನಡೆದಿದ್ದು, ಸಭೆಯಲ್ಲಿ ನೋಟಿನ ಮೇಲಿನ ನಿಷೇಧ ಹೇರಿಕೆಯಿಂದಾದ ಪರಿಣಾಮಗಳ ಬಗ್ಗೆ ಹಿರಿಯ ಸಚಿವರ ಬಳಿ ಮಾಹಿತಿ ಪಡೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ.
ಸಭೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವ ಅರುಣ್ ಜೇಟ್ಲಿ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ವೆಂಕಯ್ಯ ನಾಯ್ಡು, ಇಂಧನ, ಕಲ್ಲಿದ್ದಲು ಮತ್ತು ಗಣಿ ಸಚಿವ ಪಿಯೂಷ್ ಗೋಯಲ್ ಹಾಗೂ ಇನ್ನಿತರೆ ಉನ್ನತಾಧಿಕಾರಿಗಳು ಹಾಜರಿದ್ದರು.
ರು.500 ಹಾಗೂ 1,000 ಮುಖಬೆಲೆಯ ದುಬಾರಿ ನೋಟಿನ ಮೇಲೆ ದಿಢೀರನೇ ಹೇರಲಾದ ನಿಷೇಧದಿಂದಾಗಿ ಸಾರ್ವಜನಿಕರು ಕಂಗಾಲಾಗುವಂತೆ ಮಾಡಿತ್ತು. ದಿನಗಟ್ಟಲೇ ಸಾಲಿನಲ್ಲಿ ನಿಂತು ನೋಟು ಬದಲಾವಣೆ ಮಾಡಿಕೊಳ್ಳುತ್ತಿರುವುದರಿಂದ ಕೇಂದ್ರದ ವಿರುದ್ಧ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಿರಿಯ ಸಚಿವರೊಂದಿಗೆ ಸಭೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.