ಇಸ್ರೇಲ್ ಅಧ್ಯಕ್ಷ ರ್ಯೂವೆನ್ ರಿವ್ಲಿನ್
ನವದೆಹಲಿ: 8 ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಇಸ್ರೇಲ್ ಅಧ್ಯಕ್ಷ ರ್ಯೂವೆನ್ ರಿವ್ಲಿನ್ ಭಯೋತ್ಪಾದನೆ ನಿರ್ನಾಮ ಮಾಡುವ ವಿಚಾರದಲ್ಲಿ ಭಾರತಕ್ಕೆ ಬೆಂಬಲ ನೀಡುತ್ತೇವೆ ಎಂದು ಘೋಶಿಸಿದ್ದಾರೆ.
ಭಾರತ-ಇಸ್ರೇಲ್ ನಡುವಿನ ದ್ವಿಪಕ್ಷೀಯ ಸ್ನೇಹ ಸಂಬಂಧ ಮರೆಮಾಡುವಂಥದ್ದಲ್ಲ, ಭಯೋತ್ಪಾದನೆ ನಿರ್ಮೂಲನೆ ವಿಚಾರದಲ್ಲಿ ಇಸ್ರೇಲ್ ಭಾರತಕ್ಕೆ ಬೆಂಬಲ ನೀಡಲಿದೆ ಎಂದು ಇಸ್ರೇಲ್ ಅಧ್ಯಕ್ಷ ರ್ಯೂವೆನ್ ರಿವ್ಲಿನ್ ತಿಳಿಸಿದ್ದಾರೆ. ಎರಡು ದಶಕದಲ್ಲಿ ಭಾರತಕ್ಕೆ ಭೇಟಿ ನೀಡುತ್ತಿರುವ ಮೊದಲ ಅಧ್ಯಕ್ಷ ರ್ಯೂವೆನ್ ರಿವ್ಲಿನ್ ಆಗಿದ್ದು, ಪ್ಯಾಲೆಸ್ಟೇನ್ ವಿಚಾರದಲ್ಲಿ ಭಾರತದೊಂದಿಗೆ ಇಸ್ರೇಲ್ ನ ಭಿನ್ನಾಭಿಪ್ರಾಯ ಇರುವುದನ್ನು ಒಪ್ಪಿಕೊಂಡಿದ್ದಾರೆ, ಅಂತೆಯೇ ವೃದ್ಧಿಯಾಗುತ್ತಿರುವ ಭಾರತ- ಇಸ್ರೇಲ್ ದ್ವಿಪಕ್ಷೀಯ ಸಂಬಂಧದ ಬಗ್ಗೆಯೂ ಮಾತನಾಡಿದ್ದಾರೆ.
ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಿಕೊಳ್ಳಲು ಭಾರತದ ಬೆನ್ನಿಗೆ ನಿಲ್ಲುವುದು ಇಸ್ರೇಲ್ ಗೆ ಹೆಮ್ಮೆಯ ವಿಷಯ ಎಂದು ರ್ಯೂವೆನ್ ರಿವ್ಲಿನ್ ತಿಳಿಸಿದ್ದಾರೆ. ಭಯೋತ್ಪಾದನೆಯನ್ನು ಯಾರು ಮಾಡಿದರೂ ಅದು ಭಯೋತ್ಪಾದನೆಯೇ, ಭಯೋತ್ಪಾದನೆಯನ್ನು ಖಂಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಇಸ್ರೇಲ್ ಅಧ್ಯಕ್ಷ ರ್ಯೂವೆನ್ ರಿವ್ಲಿನ್ ಅಭಿಪ್ರಾಯಪಟ್ಟಿದ್ದಾರೆ.