ನವದೆಹಲಿ: ಬ್ಯಾಗ್ ಕದ್ದು ಪರಾರಿಯಾಗುತ್ತಿದ್ದ ಕಳ್ಳರನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿ ಮೇಲೆ ಗುಂಡು ಹಾರಿಸಿರುವ ಘಟನೆಯೊಂದು ರಾಜಧಾನಿ ದೆಹಲಿಯಲ್ಲಿ ಮಂಗಳವಾರ ನಡೆದಿದೆ.
ಸತ್ಯಪಾಲ್ (37) ಗುಂಡಿನ ದಾಳಿಗೆ ಒಳಗಾದ ವ್ಯಕ್ತಿಯಾಗಿದ್ದಾರೆ. ಇಂದು ಬೆಳಿಗ್ಗೆ ಜಿಮ್ ಹೋಗಿ ಬಂದಿದ್ದ ಸತ್ಯಪಾಲ್ ಅವರು, ತಮ್ಮ ಬ್ಯಾಗ್'ನ್ನು ಕಾರಿನ ಹಿಂಬದಿಯಲ್ಲಿ ಇಟ್ಟು ಚಾಲಕನ ಪಕ್ಕದಲ್ಲಿದ್ದ ಸೀಟ್ ನಲ್ಲಿ ಕುಳಿತುಕೊಂಡಿದ್ದರು.
ಈ ವೇಳೆ ಯಾರ ಗಮನಕ್ಕೂ ಬಾರದಂತೆ ಬ್ಯಾಗ್ ನ್ನು ತೆಗೆದುಕೊಂಡಿರುವ ಕಳ್ಳಲು ಸ್ಥಳದಿಂದ ಪರಾರಿಯಾಗುತ್ತಿದ್ದರು. ಪರಾರಿಯಾಗುತ್ತಿದ್ದ ಕಳ್ಳರನ್ನು ನೋಡಿದ ಸತ್ಯಪಾಲ್ ಅವರನ್ನು ಕಳ್ಳರನ್ನು ಹಿಂಬಾಲು ಆರಂಭಿಸಿದ್ದಾರೆ. ಇದರಂತೆ ಸತ್ಯಪಾಲ್ ಅವರನ್ನು ಹೆದರಿಸುವ ಸಲುವಾಗಿ ಕಳ್ಳರು ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದಕ್ಕೆ ಹೆದರದೆ ಸತ್ಯಪಾಲ್ ಅವರು ಮತ್ತೆ ಹಿಂಬಾಲಿಸಲು ಆರಂಭಿಸಿದ್ದಾರೆ. ನಂತರ ಕಳ್ಳರು ನೇರವಾಗಿ ಸತ್ಯಾಪಾಲ್ ಅವರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸತ್ಯಪಾಲ್ ಅವರ ತೊಡೆ ಭಾಗದಲ್ಲಿ ಗಾಯವಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.