ಲಖನೌ: ದೇಶಾದ್ಯಂತ ಕಪ್ಪುಹಣದ ವಿರುದ್ಧ ಅಭಿಪ್ರಾಯ ವ್ಯಕ್ತವಾಗುತ್ತಿದ್ದರೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಚರ್ಚೆಗೆ ಗ್ರಾಸವಾಗುವ ರೀತಿಯಲ್ಲಿ ಕಪ್ಪುಹಣದ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ.
ಜಾಗತಿಕ ಆರ್ಥಿಕ ಹಿಂಜರಿತದ ಸಮಯದಲ್ಲಿ ದೇಶದ ಆರ್ಥಿಕತೆಗೆ ಕಪ್ಪುಹಣ ಸಹಕಾರಿಯಾಗಿತ್ತು ಎಂದು ಅನೇಕ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದರು, ಜಾಗತಿಕ ಅಪಸರಣದ ವೇಳೆಯಲ್ಲಿ ಭಾರತಕ್ಕೆ ಅದರ ಪರಿಣಾಮ ತಟ್ಟಿರಲಿಲ್ಲ. ಏಕೆಂದರೆ ಭಾರತದಲ್ಲಿ ಕಪ್ಪು ಹಣದ ಪರ್ಯಾಯ ಆರ್ಥಿಕತೆ ಗಟ್ಟಿಯಾಗಿತ್ತು ಎಂಬುದು ತಜ್ಞರ ಅಭಿಪ್ರಾಯವಾಗಿತ್ತು ಎಂದು ಅಖಿಲೇಶ್ ಯಾದವ್ ತಿಳಿಸಿದ್ದಾರೆ.
ಇಂಡೋ-ಮಯನ್ಮಾರ್-ಥಾಯ್ ಲ್ಯಾಂಡ್ ಫ್ರೆಂಡ್ ಶಿಪ್ ಕಾರ್ ರ್ಯಾಲಿ ಉದ್ಘಾಟನಾ ಸಮಾರಂಭದಲ್ಲಿ ಅಖಿಲೇಶ್ ಯಾದವ್ ಈ ಹೇಳಿಕೆ ನೀಡಿದ್ದು, ಕಪ್ಪುಹಣವನ್ನು ತಾವೂ ವಿರೋಧಿಸುವುದಾಗಿ ಹೇಳಿದ್ದಾರೆ. ಕಪ್ಪುಹಣವನ್ನು ಹೊರತೆಗೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ 500, 1000 ರೂ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿರುವ ಕೆಲವೇ ದಿನಗಳ ನಂತರ ಅಖಿಲೇಶ್ ಯಾದವ್ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಬಡವರಿಗೆ ಸಮಸ್ಯೆ ಉಂಟು ಮಾಡುವ ಸರ್ಕಾರಗಳು ಚುನಾವಣೆಯಲ್ಲಿ ಸೋತಿವೆ, ಈ ಸರ್ಕಾರ ಸಹ ಬಡವರಿಗೆ ಹೆಚ್ಚು ಸಮಸ್ಯೆ ಉಂಟುಮಾಡಿದೆ ಎಂದಿರುವ ಅಖಿಲೇಶ್ ಯಾದವ್, ನೋಟುಗಳ ರದ್ದತಿಯಿಂದ ಕಪ್ಪುಹಣ ನಿಯಂತ್ರಣ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.