ನವದೆಹಲಿ: ನೋಟ್ ನಿಷೇಧದಿಂದಾಗಿ ದೇಶಾದ್ಯಂತ ಜನಸಾಮಾನ್ಯರ ದೈನಿಂದನ ವ್ಯವಹಾರಕ್ಕಾಗಿ ಪರದಾಡುತ್ತಿದ್ದು, ಕೇಂದ್ರ ಸರ್ಕಾರ ಈ ಕೂಡಲೇ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಆಗ್ರಹಿಸಿದ್ದಾರೆ.
ಇಂದು ದೆಹಲಿ ವಿಧಾನಸಭೆಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ನಾಯಕ, 500 ಹಾಗೂ 1000 ರುಪಾಯಿ ದಿಢೀರ್ ನಿಷೇಧದ ಬಗ್ಗೆ ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮಧ್ಯಪ್ರವೇಶಿಸಿ, ನೋಟ್ ನಿಷೇಧದ ನಿರ್ಧಾರ ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ದೆಹಲಿ ವಿಧಾನಸಭೆ ನಿರ್ಣಯ ಕೈಗೊಂಡಿದೆ.
ನಿರ್ಣಯ ಮಂಡಿಸಿ ಮಾತನಾಡಿದ ಕೇಜ್ರಿವಾಲ್ ಅವರು, 500 ಹಾಗೂ 100 ನೋಟ್ ನಿಷೇಧದಿಂದ ಜನಸಾಮಾನ್ಯರಿಗೆ ಮಾತ್ರ ತೊಂದರೆಯಾಗಿದೆ. ಒಂದು ನಿರ್ಧಿಷ್ಟ ರಾಜಕೀಯ ಪಕ್ಷಕ್ಕೆ ಲಾಭ ಮಾಡಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದ್ದು, ಈ ಬಗ್ಗೆ ಉನ್ನತ ಮಟ್ಚದ ತನಿಖೆಗೆ ಅಗತ್ಯವಿರುವ ಕ್ರಮಗಳನ್ನು ರಾಷ್ಟ್ರಪತಿಗಳು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ನವೆಂಬರ್ 8ರಂದು ದಿಢೀರ್ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಪ್ಪು ಹಣ, ಭ್ರಷ್ಟಾಚಾರ ಹಾಗೂ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ನಕಲಿ ನೋಟುಗಳ ಹಾವಳಿ ತಡೆಯುವುದಕ್ಕಾಗಿ ಇಂದು ಮಧ್ಯರಾತ್ರಿಯಿಂದಲೇ 500 ಹಾಗೂ 1000 ರುಪಾಯಿ ನೋಟ್ ಗಳಿಗೆ ನಿಷೇಧ ಹೇರಲಾಗಿದೆ ಎಂದು ಘೋಷಿಸಿದ್ದರು. ಅಂದಿನಿಂದ ದೇಶಾದ್ಯಂತ ಹಣಕಾಸಿನ ತಾತ್ಕಾಲಿಕ ತರ್ತು ಪರಿಸ್ಥಿತಿ ಸೃಷ್ಟಿಯಾಗಿದ್ದು, ಜನ ಎಟಿಎಂ ಹಾಗೂ ಬ್ಯಾಂಕ್ ಮುಂದೆ ನೋಟ್ ವಿನಿಮಯ ಮಾಡಿಕೊಳ್ಳಲು ಸಾಲುಗಟ್ಟಿ ನಿಂತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics