ಗಡಿಭಾಗದ ಈ ಊರಿಗೆ ನೋಟುಗಳ ರದ್ದತಿ ತಿಳಿದಿದ್ದು ಮೂರು ದಿನಗಳ ಬಳಿಕ!
ಗುವಾಹಟಿ: ನ.8ರಂದು ರಾತ್ರಿ 8 ಗಂಟೆಗೆ ರೂ 500, 1000 ನೋಟುಗಳನ್ನು ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆ ದೇಶಾದ್ಯಂತ ಮಿಂಚಿನಂತೆ ಸಂಚರಿಸಿತ್ತು. ಆದರೆ ಅರುಣಾಚಲಪ್ರದೇಶದಲ್ಲಿರುವ ಈ ಪಟ್ಟಣಕ್ಕೆ ಪ್ರಧಾನಿ ಮೋದಿ ಅವರ ಘೋಷಣೆ ತಿಳಿದಿದ್ದು ಮೂರು ದಿನಗಳ ಬಳಿಕ ಎಂಬ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 500, 1000 ರೂ ನೋಟುಗಳನ್ನು ರದ್ದುಗೊಳಿಸಿರುವ ನಿರ್ಧಾರ ಪ್ರಕಟಿಸಿದ್ದರ ಬಗ್ಗೆ ಅರುಣಾಚಲಪ್ರದೇಶದ ಮೆಚುಕ ಪಟ್ಟಣದಲ್ಲಿ ಎಸ್ ಬಿಐ, ಜಿಲ್ಲಾಡಳಿತದ ಕೆಲವು ಅಧಿಕಾರಿಗಳು ಹಾಗೂ ರಕ್ಷಣಾ ಸಿಬ್ಬಂದಿಗಳನ್ನು ಹೊರತುಪಡಿಸಿದರೆ ಉಳಿದ ಯಾವುದೇ ನಾಗರಿಕನಿಗೂ ಈ ಬಗ್ಗೆ ಮಾಹಿತಿಯೇ ಇರಲಿಲ್ಲವಂತೆ! ಸುಮಾರು 160 ಗ್ರಾಮ, 13,200 ಜನಸಂಖ್ಯೆ ಹೊಂದಿರುವ ಮೆಚುಕ ಪಟ್ಟಣಕ್ಕೆ 500, 1000 ರೂ ನೋಟುಗಳ ಚಲಾವಣೆ ರದ್ದುಗೊಂಡಿರುವುದರ ಬಗ್ಗೆ ತಿಳಿದಿದ್ದು, ಘೋಷಣೆಯಾದ ಮೂರು ದಿನಗಳ ಬಳಿಕ, ಮೆಚುಕ 6,200 ಅಡಿ ಎತ್ತರದಲ್ಲಿದ್ದು, ರಾಜ್ಯದ ರಾಜಧಾನಿ ಇಟಾನಗರ ಇಲ್ಲಿಂದ 492 ಕಿಮೀ ದೂರದಲ್ಲಿದೆ. ಇಲ್ಲಿ ರಕ್ಷಣಾ ಪಡೆಗಳಿಗಾಗಿ ವಾಯುನೆಲೆಯನ್ನೂ ನಿರ್ಮಿಸಲಾಗಿದ್ದು, ವಾಯುನೆಲೆಯನ್ನು ಹೆಲಿಕಾಫ್ಟರ್ ಸೇವೆಯನ್ನು ಒದಗಿಸುವ ಖಾಸಗಿ ಸಂಸ್ಥೆ ಸ್ಕೈ ಒನ್ ಏರ್ ವೇಸ್ ಸಹ ಬಳಸಿಕೊಳ್ಳುತ್ತಿದೆ. ಇನ್ನು ಮೆಚುಕಗೆ ಆಲೋ ಎಂಬ ಜಿಲ್ಲಾ ಕೇಂದ್ರ ಹತ್ತಿರವಿದ್ದು, ಮೆಚುಕಾ ಹಾಗೂ ಈ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟ ಸ್ಥಿತಿಯಲ್ಲಿದ್ದು, ಇದ್ದರೂ ಇಲ್ಲದಂತಿದೆ.
ಇನ್ನು ಎಟಿಎಂ ಸೌಲಭ್ಯವೂ ಇಲ್ಲದ ಮೆಚುಕ ಪಟ್ಟಣದಲ್ಲಿ, ಜನರಿಗೆ ನೋಟುಗಳ ಬ್ಯಾನ್ ಬಗ್ಗೆ ತಿಳಿಯಲು ಸಾಧ್ಯವಿದ್ದದ್ದು ಎಸ್ ಬಿಐ ಬ್ಯಾಂಕ್ ನ ಶಾಖೆ ಮೂಲಕ ಮಾತ್ರ. ನೋಟ್ ಬ್ಯಾನ್ ಆಗಿರುವ ವಿಚಾರ ತಿಳಿಯುವವರೆಗೆ ಅಂದರೆ ನ.9, 10 ರಂದು ಬ್ಯಾಂಕ್ ನಲ್ಲಿ ನೋಟು ಬದಲಾವಣೆಗಾಗಿ ಜನದಟ್ಟಣೆ ಇರಲೇ ಇಲ್ಲ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ದುಬಾರಿ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿರುವ ಬಗ್ಗೆ ಬಹುತೇಜ ಜನರಿಗೆ ಮೊದಲ ಬಾರಿಗೆ ಮಾಹಿತಿ ಸಿಕ್ಕಿದ್ದು ಗುವಾಹಟಿಯಲ್ಲಿರುವ ತಮ್ಮ ಪರಿಚಯದ ವ್ಯಕ್ತಿಗಳಿಂದ. ಆದರೆ ಮಾಹಿತಿ ತಿಳಿದ ಮೂರನೇ ದಿನವೂ ಸಹ ಈ ಪ್ರದೇಶದಲ್ಲಿ ಬಿಎಸ್ಎನ್ಎಲ್ ಸಂಪರ್ಕವೂ ಸಹ ಕಡಿತಗೊಂಡಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆ ಬಗ್ಗೆ ಅರಿವೇ ಇಲ್ಲದಿದ್ದರಿಂದ ಮರು ದಿನ ಬೆಳಿಗ್ಗೆ ಬ್ಯಾನ್ ಆಗಿದ್ದ ನೋಟುಗಳನ್ನೇ ಇಡೀ ನಗರದ ಜನತೆ ಬಳಕೆ ಮಾಡಿದ್ದಾರೆ. ಪರಿಣಾಮವಾಗಿ ಗಡಿ ಪ್ರದೇಶದ ನಗರದ ಆರ್ಥಿಕತೆ ಸಂಪೂರ್ಣ ಅವ್ಯವಸ್ಥೆಗೀಡಾಗಿತ್ತು. ನಮಗೆ ನೋಟುಗಳು ರದ್ದುಗೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದ್ದೇ ನ.11 ರಂದು ಅಂದಿನಿಂದ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಯತ್ನಿಸುತ್ತಿದ್ದೇವೆ ಆದರೆ ಚಿಲ್ಲರೆ ಇಲ್ಲ ಎಂದು ಹೇಳುತ್ತಿದ್ದಾರೆ, ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ, ನೋಟುಗಳ ರದ್ದತಿ ಮಾಹಿತಿ ಬಹಿರಂಗವಾದಾಗಿನಿಂದ ವ್ಯಾಪರ ವಹಿವಾಟುಗಳು ಸಂಪೂರ್ಣ ಬಂದ್ ಆಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.