ದೇಶ

ನೋಟು ನಿಷೇಧ: ಮೋದಿ ನಿರ್ಧಾರಕ್ಕೆ ವ್ಯಾಪಾರಸ್ಥರ ಬೆಂಬಲ, ಕೇಜ್ರಿವಾಲ್ ವಿರುದ್ಧ ಪ್ರತಿಭಟನೆ

Manjula VN

ನವದೆಹಲಿ: ದುಬಾರಿ ನೋಟಿನ ಮೇಲೆ ನಿಷೇಧ ಹೇರಿ ಕಠಿಣ ನಿರ್ಧಾರ ತೆಗೆದುಕೊಂಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಡದೆ ದೆಹಲಿ ವ್ಯಾಪಾರಸ್ಥರು ಬೆಂಬಲವನ್ನು ವ್ಯಕ್ತಪಡಿಸಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ನೋಟಿನ ಮೇಲೆ ನಿಷೇಧ ಹೇರಿರುವುದರ ಹಿಂದೆ ದೊಡ್ಡ ಹಗರಣವಿದೆ ಎಂದು ಈ ಹಿಂದೆ ಕೇಜ್ರಿವಾಲ್ ಅವರು ಆರೋಪಿಸಿದ್ದರು. ಇದಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬೆಂಬಲವನ್ನು ವ್ಯಕ್ತಪಡಿಸಿದ್ದರು.

ನಿನ್ನೆಯಷ್ಟೇ ಮೋದಿ ಸರ್ಕಾರದ ವಿರುದ್ಧ ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಹಾಗೂ ಇನ್ನಿತರೆ ವಿರೋಧ ಪಕ್ಷದ ನಾಯಕರು ಪ್ರತಿಭಟನಾ ರ್ಯಾಲಿಯನ್ನು ನಡೆಸಿದ್ದರು.

ಇದರ ಬೆನ್ನಲ್ಲೇ ಮೋದಿಗೆ ಬೆಂಬಲ ವ್ಯಕ್ತಪಡಿಸಿ ದೆಹಲಿಯಲ್ಲಿ ಕೇಜ್ರಿವಾಲ್ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದು, ಮೋದಿ ವಿರುದ್ಧ ಪ್ರತಿಭಟನಾ ರ್ಯಾಲಿ ಎಂದು ಹಾಕಲಾಗಿದ್ದ ಪೋಸ್ಟರ್ ಗಳನ್ನು ಕಿತ್ತು ಹಾಕಿ, ಕೇಜ್ರಿವಾಲ್ ವಿರುದ್ಧ ಘೋಷಣಾ ವಾಕ್ಯಗಳನ್ನು ಕೂಗಲಾಗುತ್ತಿದೆ.

ದೆಹಲಿ ಅಜಾದ್ಪುರ್ ಮಂಡಿಯ ವ್ಯಾಪಾರಸ್ಥರು ಕೇಜ್ರಿವಾಲ್ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ನೋಟು ನಿಷೇಧ ವಿಚಾರದಲ್ಲಿ ಕೇಜ್ರಿವಾಲ್ ಅವರು ರಾಜಕೀಯ ಮಾಡುತ್ತಿದ್ದಾರೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಪ್ಪು ರಿಬ್ಬನ್ ಧರಿಸುವ ಮೂಲಕ ಹಲವು ಪ್ರತಿಭಟನೆಗೆ ಬೆಂಬಲವನ್ನು ವ್ಯಕ್ತಪಡಿಸಿದ್ದು, ಕೇಜ್ರಿವಾಲ್ ಹೇ...ಹೇ...ಕೇಜ್ರಿವಾಲ್ ಚೋರ್ ಹೇ... ಎಂದು ಘೋಷಣಾ ವಾಕ್ಯವಾಗಳನ್ನು ಕೂಗುತ್ತಿದ್ದಾರೆ.

ಕೇಜ್ರಿವಾಲ್ ಒಬ್ಬ ದೊಡ್ಡ ಭ್ರಷ್ಟ ರಾಜಕಾರಣಿಯಾಗಿದ್ದು, ನೋಟು ನಿಷೇಧ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆಯೇ ವಿನಃ ಏನನ್ನೂ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರೊಬ್ಬರು ಹೇಳಿದ್ದಾರೆ.

SCROLL FOR NEXT