ನವದೆಹಲಿ: ದುಬಾರಿ ನೋಟಿನ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿರುವುದಕ್ಕೆ ಬೇಸರಗೊಂಡು ವಿರೋಧ ಪಕ್ಷಗಳೊಂದಿಗೆ ಶಿವಸೇನೆ ಕೈಜೋಡಿಸಿರುವ ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರೊಂದಿಗೆ ಮಾತುಕತೆ ನಡೆಸಿದ್ದಾರೆಂದು ಗುರುವಾರ ತಿಳಿದುಬಂದಿದೆ.
ಉದ್ಧವ್ ಠಾಕ್ರೆಯವರೊಂದಿಗೆ 10 ನಿಮಿಷಗಳ ಕಾಲ ಫೋನಿನಲ್ಲಿ ಮಾತನಾಡಿರುವ ರಾಜನಾಥ ಸಿಂಗ್ ಅವರು, ಮೋದಿಯವರ ಬೆಂಬಲಕ್ಕೆ ನಿಲ್ಲುವ ಬದಲು ಶಿವಸೇನೆ ಪ್ರತಿಪಕ್ಷಗಳೊಂದಿಗೆ ಕೈಜೋಡಿಸಿ ಪ್ರತಿಭಟನೆ ನಡೆಸುತ್ತಿದೆ. ಇದರಿಂದ ಗೊಂದಲಯುತ ಸಂದೇಶಗಳು ರವಾನೆಯಾಗುತ್ತಿದ್ದು, ಈ ರೀತಿಯ ನಡೆ ಸರಿಯಲ್ಲ ಎಂದು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.
ನೋಟು ನಿಷೇಧಕ್ಕೆ ವಿರೋಧಿಸಿ ತೃಣಮೂಲ ಕಾಂಗ್ರೆಸ್ ಪಕ್ಷ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರು ನಿನ್ನೆಯಷ್ಟೇ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಗೆ ಬಿಜೆಪಿ ಮೈತ್ರಿ ಪಕ್ಷ ಶಿವಸೇನೆ ಬೆಂಬಲ ವ್ಯಕ್ತಪಡಿಸಿತ್ತು.